ಮಲೆನಾಡಿನಿಂದಷ್ಟೆ ಪುರಾತನ ಸಂಸ್ಕೃತಿ ಉಳಿವು…

789

ಮೂಡಿಗೆರೆ : ಆಧುನಿಕತೆ ಜನ ಹೊಲ-ಗದ್ದೆಗಳನ್ನ ನಾಟಿ ಮಾಡುವ ವಿಧಾನವೇ ಬೇರೆ. ಹತ್ತಿಪ್ಪತ್ತು ಜನ ಏಕಕಾಲದಲ್ಲಿ ಟ್ರ್ಯಾಕ್ಟರ್, ಟ್ರಿಲ್ಲರ್‍ಗಳ ಸಹಾಯದಲ್ಲಿ ಒಂದೇ ದಿನದಲ್ಲಿ ಭತ್ತದ ಗದ್ದೆಗಳ ನಾಟಿಯನ್ನ ಮುಗಿಸಿರ್ತಾರೆ. ಆದ್ರೆ, ಮೂಡಿಗೆರೆ ತಾಲೂಕಿನ ಬಿನ್ನಡಿ-ಕೊಡೆಬೈಲ್ ಗ್ರಾಮದಲ್ಲಿ ಹಾಗಾಲ್ಲ. ನಾಟಿ ಮಾಡುವ ಹೆಂಗಸರೆಲ್ಲಾ ಸೀರೆಯುಟ್ಟು ಭೂಮಿ ತಾಯಿ ಹಾಗೂ ವರುಣ ದೇವನಿಗೆ ಪೂಜೆ ಸಲ್ಲಿಸಿ ಬಿತ್ತನೆ ಪದವಾಡ್ತಾ ಗದ್ದೆಗೆ ಇಳಿಯುತ್ತಾರೆ. ಈ ಸಂಸ್ಕೃತಿ ಮಲೆನಾಡಲ್ಲಿ ಇಂದಿಗೂ ಜೀವಂತ. ಎಲ್ಲರಿಗೂ ಹಾಡು ಬರೋದಿಲ್ಲ. ಆದ್ರೆ, ಬರುವಂತವರು ಹಾಡು ಹೇಳ್ತಾ ನಾಟಿ ಮಾಡಿದ್ರೆ ಉಳಿದ ಹೆಂಗಸರು ಅವರ ಧ್ವನಿಗೆ ಧ್ವನಿಯಾಗ್ತಾರೆ. ಮಲೆನಾಡಿನ ಹೆಂಗಸರ ಈ ನಾಟಿ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೋವನ್ನ ನೋಡಿದ ಆಧುನಿಕ ಜನ ಇಂದಿಗೂ ಇಂತಹ ಆಚರಣೆಗಳು ಜೀವಂತವಾಗಿದ್ಯಾ ಅಂತ ಆಶ್ಚರ್ಯ ಚಕಿತರಾಗಿದ್ದಾರೆ. ಈ ಆಚರಣೆ ಮಲೆನಾಡಲ್ಲಿ ಎಂದಿಗೂ ಮರೆಯಾಗೋದಿಲ್ಲ. ಬೆಳೆ ಬರಲಿ, ಬಾರದಿರಲಿ. ಮಲೆನಾಡಿಗರು ಈ ರೀತಿಯ ಆಚರಣೆ ಇಲ್ಲದೆ ಗದ್ದೆಗಳನ್ನ ನಾಟಿ ಮಾಡೋದಿಲ್ಲ. ಈ ಆಚರಣೆ, ಸಂಸ್ಕೃತಿ, ವಿಧಿ-ವಿಧಾನ ಮಲೆನಾಡಲ್ಲಿ ಎಂದೆಂದಿಗೂ ಅಜರಾಮರ.