ಚಿಕ್ಕಮಗಳೂರು: ನನ್ನ ಗಂಡನದ್ದು ಆಕಸ್ಮಿಕ ಸಾವಲ್ಲ ಕೊಲೆ ಎಂದು ಮೃತನ ಪತ್ನಿ ಎಸ್ಪಿಗೆ ದೂರು ನೀಡಿದ ಹಿನ್ನೆಲೆ ಅಂತ್ಯಸಂಸ್ಕಾರವಾಗಿ 20 ದಿನ ಕಳೆದಿದ್ದ ಮೃತದೇಹವನ್ನ ಮತ್ತೆ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಗ್ರಾಮದಲ್ಲಿ ನಡೆದಿದೆ. ಕಳೆದ ಆಗಸ್ಟ್ 12 ರಂದು ಹಿರೇಕೊಳಲೆ ಗ್ರಾಮದ ವಿನೋದ್ ಎಂಬುವನು ಸಾವನ್ನಪ್ಪಿದ್ದ. ತೋಟದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ವಿನೋದ್ನನ್ನ ತಾಯಿ ಹಾಗೂ ಹೆಂಡತಿ ಮನೆಗೆ ಕರೆತಂದಿದ್ರು. ಆದ್ರೆ, ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಆತ ಸಾವನ್ನಪ್ಪಿದ್ದ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದ್ರೆ, ವಿನೋದ್ ಸಂಬಳದ ವಿಚಾರವಾಗಿ ತೋಟದ ಮಾಲೀಕರೊಂದಿಗೆ ಜಗಳವಾಡಿದ್ದ ಎಂದು ತಿಳಿದಿದ್ರಿಂದ, ಮೃತ ವಿನೋದ್ ಪತ್ನಿ ರಂಗಮ್ಮ ತೋಟದ ಮಾಲೀಕ ತೀರ್ಥೇಗೌಡ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ರು. ಪತ್ನಿಯ ದೂರಿನನ್ವಯ ಮಣ್ಣು ಮಾಡಿ 20 ದಿನ ಕಳೆದಿದ್ದ ಮೃತದೇಹವನ್ನ ಮತ್ತೆ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.