ಮೂಡಿಗೆರೆ : ಕೇರಳ ರಾಜ್ಯದ ರೈತರ ಜಮೀನು ಹಾಗೂ ಬೆಳೆಗಳ ಸಮಸ್ಯೆಗಳಿಗೆ ಆ ರಾಜ್ಯ ಕಂಡುಕೊಂಡ ಪರಿಹಾರದ ವರದಿಯನ್ನು ತರಿಸಿಕೊಂಡು ರಾಜ್ಯದ ಬೆಳೆಗಾರರ ಹಾಗೂ ಒತ್ತುವರಿದಾರರ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸೂಕ್ತ ಕಾನೂನು ರೂಪಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಅವರು ಪಟ್ಟಣದ ರೈತ ಭವನದಲ್ಲಿ ಮಂಗಳವಾರ ತಾಲೂಕು ಬೆಳೆಗಾರರ ಸಂಘದ ವತಿಯಿಂದ ನಡೆದ ಅಂತರಾಷ್ಟ್ರೀಯ ಕಾಫಿ ಉತ್ಸವ ಹಾಗೂ ರೈತ ಬೆಳೆಗಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ನಿಮ್ಮೊಂದಿಗೆ ನಾವಿದ್ದೇವೆ. ರೈತರೇ ನಿಮ್ಮ ಸಮಸ್ಯೆಯನ್ನು ನಿಸ್ಸಂದೇಹದಿಂದ ಸರಕಾರದ ಬಳಿ ಹೇಳಿಕೊಂಡಿದ್ದೀರಿ. ಅದರ ಪರಿಹಾರಕ್ಕೆ ವಿಧಾನ ಸಭೆಯಲ್ಲಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಬೆಳೆಗಾರ ಭೂಮಿ ಸಮಸ್ಯೆ ಇತ್ಯರ್ಥಪಡಿಸುವ ಅಗತ್ಯವಿದೆ. 50 ವರ್ಷಗಳ ಹಿಂದೆ ಒತ್ತುವರಿ ಸಮಸ್ಯೆ ಬಗ್ಗೆ ಸರಕಾರಕ್ಕೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಫಾ.ನಂ 53 ಯಲ್ಲಿ ರೈತರು ಅರ್ಜಿ ಸಲ್ಲಿಸಿ 15 ವರ್ಷಗಳಾಗಿವೆ. ಈ ಅರ್ಜಿಗಳು ಸರಕಾರದ ಸುಪರ್ಧಿಯಲ್ಲಿ ಕೊಳೆಯುತ್ತಾ ಬಿದ್ದಿದ್ದರೂ ಇತ್ಯರ್ಥ ಭಾಗ್ಯ ಕಂಡಿಲ್ಲ. ತಾವು ಕಂದಾಯ ಸಚಿವರಾದ ನಂತರ ಹಿಂದಿನ ತಲೆ ಮಾರಿನ ಶಾನುಭೂಗರ ರೀತಿಯಲ್ಲಿ ಕೆಲಸ ಮಾಡಿ ಈ ಅರ್ಜಿಗಳಿಗೆ ಇತ್ಯರ್ಥ ಬಾಗ್ಯ ಕಂಡು ಕೊಂಡಿದ್ದೇನೆ. ಇದನ್ನು ರಾಜ್ಯದ ಶಾಸಕರುಗಳು ತಿಳಿದುಕೊಳ್ಳದಿರುವುದು ದುರಂತ ಎಂದು ವಿಷಾಧ ವ್ಯಕ್ತಪಡಿಸಿದರು.
ಊಳುವವ ಹೇಗೆ ಹೊಲದೊಡೆಯನೋ ಹಾಗೆಯೇ ವಾಸ ಮಾಡುವವನೆ ಆ ಭೂಮಿಯ ಒಡೆಯನೆಂದು 94 ಸಿ ಯಲ್ಲಿ ಅರ್ಜಿ ಹಾಕಿದವರಿಗೆ ಮುಂದಿನ 3 ತಿಂಗಳಲ್ಲಿ ಅದೇ ಜಾಗಕ್ಕೆ ಹಕ್ಕು ಪತ್ರ ನೀಡಲಾಗುವುದು ಎಂದ ಅವರು, ತಹಸೀಲ್ದಾರ್‍ಗಳೆ ಭೂಮಿಯ ಎಲ್ಲಾ ಧಾಖಲೆಗಳನ್ನು ತಯಾರಿ ಮಾಡಬೇಕು. ಆದರೆ ತಹಸೀಲ್ದಾರರುಗಳು ದಿವಾಳಿಯಾದಂತಾಗಿದ್ದಾರೆ. ಆದ್ದರಿಂದಾಗಿ ರೈತರ ಸಮಸ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇಲ್ಲಿಂದಲೇ ಕಂದಾಯ ಹಕ್ಕು ಪತ್ರಗಳನ್ನು ತಮ್ಮ ಇಲಾಖೆಯಿಂದ ವಿಳಂಬವಿಲ್ಲದೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಫಾ.ನಂ. 53ಯಲ್ಲಿ ತಿಳುವಳಿಕೆ ಇರುವ ಮಂದಿಗಳು ಮಾತ್ರ ಭೂಮಿಗಾಗಿ ಅರ್ಜಿ ಹಾಕಿದ್ದಾರೆ. ಆದರೆ ಅನುಭವದ ಕೊರತೆ ಇರುವವರು ಈಗ ಅರ್ಜಿ ಹಾಕಲು ಮುಂದೆ ಬಂದಿದ್ದಾರೆ. ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಬ್ರಿಟೀಷರ ಕಾಲದಲ್ಲಿಯೇ ಶಿಕ್ಷೆ ಮತ್ತು ದಂಡ ವಿಧಿಸುತ್ತಿರಲಿಲ್ಲ. ಆದರೆ ಈಗ 5.ಸಾವಿರ ದಂಡ ಮತ್ತು 1.ವರ್ಷ ಸಜೆ ಎಂಬ ಕಾನೂನು ಜಾರಿಯಲ್ಲಿದೆ. ನಾವು ಏನು ಮಾಡದ ಪರಿಸ್ಥಿತಿ ಉಂಟಾಗಿದ್ದು, ಈ ಬಗ್ಗೆ ರಾಜ್ಯದ ಎಲ್ಲಾ ಶಾಸಕರು ವಿಧಾನಸಭೆ ಮತ್ತು ಪರಿಷತ್‍ನಲ್ಲಿ ಗರ್ಜನೆ ಮಾಡಿದರೆ, ತಿದ್ದುಪಡಿ ಮಾಡಲು ನನಗೆ ಶಕ್ತಿ ತುಂಬಿದಂತಾಗಲಿದೆ ಎಂದ ಅವರು, ಅರಣ್ಯದಂಚಿನ ಭೂಮಿಯ ಬಗ್ಗೆ ದೊಡ್ಡ ಮಟ್ಟದ ಸಮಸ್ಯೆ ಉದ್ಭವಿಸಿದ್ದು, ಅದರ ಪರಿಹಾರಕ್ಕೆ ಸರಕಾರ ಸಿದ್ದವಿದೆ ಎಂದು ಹೇಳಿದರು.
.