ಚಿಕ್ಕಮಗಳೂರು : ಗಂಟಲಲ್ಲಿ ಅವಲಕ್ಕಿ ಸಿಕ್ಕಿ ಹಾಕಿಕೊಂಡು ಮೂರು ವರ್ಷದ ಮಗು ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಸಮೀಪದ ಶಿರಗುಂದ ಗ್ರಾಮದಲ್ಲಿ ನಡೆದಿದೆ. ಮೂರು ವರ್ಷದ ಅನೀಶ್ ಮೃತ ಮಗು. ನಿನ್ನೆ ಬೆಳಗ್ಗೆ ಮನೆಯಲ್ಲಿ ಅವಲಕ್ಕಿ ತಿಂದು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನ ಕೂಡಲೇ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುವಂತೆ ವೈದ್ಯರು ಶಿಫಾರಸ್ಸು ಮಾಡಿದ್ದಾರೆ. ಆದ್ರೆ, ಹಾಸನಕ್ಕೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ. ಕಳೆದ ಒಂದು ತಿಂಗಳಲ್ಲಿ ಈ ರೀತಿ ಮಗು ಸಾವನ್ನಪ್ಪಿರೋ ಘಟನೆ ಇದು ಎರಡನೆಯದ್ದಾಗಿದೆ. ತಿಂಗಳ ಹಿಂದೆ ನಾಲ್ಕು ವರ್ಷದ ಮಗು ಮೊಬೈಲ್ ಚಾರ್ಜ್‍ರ್ ಕಡಿದು ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿತ್ತು. ವಾರದ ಹಿಂದೆ ಟೀಚರ್ವೊಬ್ಬರಿಗೆ ಗಂಟಲಲ್ಲಿ ತೆಂಗಿನ ಕಾಯಿ ಚೂರು ಸಿಕ್ಕಿ ಸಾವನ್ನಪ್ಪಿದ್ದ ಪ್ರಕರಣ ಮಾಸುವ ಮುನ್ನವೇ ಈ ಘಟನೆ ಸಂಭವಿಸಿದೆ.