ಬೆಂಗಳೂರು: ಗುರುವಾರ ಬಂದ್ ನಡೆಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ, ಗೊಂದಲಗಳು ಇಲ್ಲ ಎಂದು ಕನ್ನಡ ಪರ ಸಂಘಟನೆಗಳು ಹೇಳಿವೆ. ಮಹದಾಯಿಗಾಗಿ ಕರೆಯಲಾದ ಬಂದ್ ವಿಚಾರವಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬಂದ್ ನಡೆಯುತ್ತದೆ ಎಂದು ವಾಟಾಳ್ ತಿಳಿಸಿದರು.
ಕೆಎಸ್‍ಆರ್ ಟಿಸಿ , ಬಿಎಂಟಿಸಿ, ಮೆಟ್ರೋ ರೈಲುಗಳು ಯಾವುದು ಸಂಚರಿಸಬಾರದು. ಐಟಿ ಕಂಪೆನಿಗಳು ಕೆಲಸ ಮಾಡಬಾರದು ಎಲ್ಲ ಕಂಪೆನಿಗಳು ಬೆಂಬಲ ನೀಡಬೇಕು ಎಂದು ಪ್ರವೀಣ್ ಶೆಟ್ಟಿ ಮನವಿ ಮಾಡಿದರು. ಬೆಳಗ್ಗೆ 9 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ಮಾಡಲು ಕನ್ನಡ ಸಂಘಟನೆಗಳು ಮುಂದಾಗಿದ್ದು, ಒಂದು ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆಯಿದೆ. ಅಂಬುಲೆನ್ಸ್, ವೈದ್ಯಕೀಯ ಸೇವೆ, ಹಾಲು ಸಾಗಾಟದ ವಾಹನಕ್ಕಷ್ಟೇ ವಿನಾಯಿತಿ ನೀಡಲಾಗಿದ್ದು ಉಳಿದ ಎಲ್ಲ ಸೇವೆಗಳು ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.
ಬುಧವಾರ ಬೆಳಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್‍ಗಳು ರಸ್ತೆಗೆ ಇಳಿಯಲಿದೆ ಎಂದು ತಿಳಿಸಿದ್ದರು. ಆದರೆ ಸಂಜೆ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಚೆನ್ನೇಗೌಡ ಈ ಬಂದ್ ಗೆ ನಮ್ಮ ಸಂಘ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಕೆಎಸ್‍ಆರ್ ಟಿಸಿ ಬಸ್ ಗಳು ರಸ್ತೆಗೆ ಇಳಿಯಲ್ಲ. ಬಂದ್ ಗೆ ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಾಕಷ್ಟು ಜನ ಪ್ರಯಾಣಕ್ಕೆ ಬಿಎಂಟಿಸಿ ಬಸ್ ಗಳನ್ನು ಅವಲಂಬಿಸಿದ್ದಾರೆ.