ಸಾರ್ವಜನಿಕ ಉದ್ದೇಶಕ್ಕಾಗಿ ಡಿಸಿ ರೋಹಿಣಿ ಅವರನ್ನು ವರ್ಗಾವಣೆ : ಸರ್ಕಾರದಿಂದ ನ್ಯಾಯಾಲಯಕ್ಕೆ ವಿವರಣೆ

1128

ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಮಾರ್ಚ್ 21ಕ್ಕೆ ಆದೇಶ ಕಾಯ್ದಿರಿಸಿದೆ. ಇಂದು ಕಲಾಪದಲ್ಲಿ ರೋಹಿಣಿ ಪರ ಹಿರಿಯ ವಕೀಲ ಜೋಯಿಸ್ ವಾದ ಮಂಡಿಸಿದರೆ, ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಎಸ್ ಪೊನ್ನಣ್ಣ ವಾದ ಮಾಡಿದರು. ಈ ವೇಳೆ ಮೈಸೂರು ಜಿಲ್ಲಾಧಿಕಾರಿ ರಂದೀಪ್ ಅವರ ವರ್ಗಾವಣೆಗೆ ಸಿಎಟಿ ತಡೆ ನೀಡಿದ್ದು, ಮುಂದಿನ ಆದೇಶ ಪ್ರಕಟವಾಗುವರೆಗೆ ಅಲ್ಲಿಯೇ ಮುಂದುವರಿಯುವಂತೆ ಸೂಚಿಸಿದೆ.

ಸಾರ್ವಜನಿಕ ಉದ್ದೇಶಕ್ಕಾಗಿ ರೋಹಿಣಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಕನಿಷ್ಠ ಎರಡು ವರ್ಷದ ನಿಯಮ ಅನ್ವಯವಾಗುವುದಿಲ್ಲ. ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಯಾವುದೇ ರೀತಿಯ ಮಂಡಳಿ ಇಲ್ಲ. ಮಂಡಳಿ ಇದ್ದರೆ ಮಾತ್ರ ನಿಯಮಗಳು ಅನ್ವಯ ಆಗುತ್ತವೆ. ಸಾರ್ವಜನಿಕ ಹಿತಾಸಕ್ತಿಯಿಂದ  ವರ್ಗಾವಣೆ ಮಾಡಲಾಗಿದೆ ಎಂದು ಪೊನ್ನಣ್ಣ ವಾದಿಸಿದರು. ಈ ವೇಳೆ ನ್ಯಾಯಪೀಠ, ಯಾವ ಸಾರ್ವಜನಿಕ ಹಿತಾಸಕ್ತಿ ಈ ವರ್ಗಾವಣೆಯಲ್ಲಿದೆ ತಿಳಿಸಿ ಎಂದು ಪ್ರಶ್ನಿಸಿದರು. ಇದಕ್ಕೆ ಪೊನ್ನಣ್ಣ, ಆ ವಿಚಾರವನ್ನು ಇಲ್ಲಿ ಬಹಿರಂಗ ಪಡಿಸುವ ಅಗತ್ಯವಿಲ್ಲ. ಕಾರ್ಯಾಂಗದ ಮುಖ್ಯಸ್ಥರಾಗಿ ಸಿಎಂ ಸಿಎ ಆದೇಶ ಮಾಡಿದ್ದಾರೆ ಎಂದು ಉತ್ತರಿಸಿದರು.

ರೋಹಿಣಿ ಪರ ಹಿರಿಯ ವಕೀಲ ಜೋಯಿಸ್, ರಾಜ್ಯದ ಮುಖ್ಯಮಂತ್ರಿಗಳಾಗಿ ನಿಯಮಗಳನ್ನು ಮೀರುವಂತಿಲ್ಲ. ಇಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಎಲ್ಲಾ ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿದ ವರ್ಗಾವಣೆ ಇದು. ಅವಧಿಗಿಂತ ಮುಂಚೆ ವರ್ಗಾವಣೆ ಮಾಡಿದರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಲೇಬೇಕು. ಕಾರಣಗಳಿಲ್ಲದೆ ವರ್ಗಾವಣೆ ಮಾಡುವಂತಿಲ್ಲ. ವರ್ಗಾವಣೆಗೂ ಮುನ್ನ ನೋಟಿಸ್ ನೀಡಬೇಕು ಎಂದು ವಾದಿಸಿದರು. ನಿಯಮಗಳ ವಿರುದ್ಧವಾಗಿ ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸಿಎಟಿ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸಿಎಟಿ ಮಾರ್ಚ್ 13ರವರೆಗೆ ವರ್ಗಾವಣೆಗೆ ತಡೆ ನೀಡಿತ್ತು.

ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶವನ್ನು ಮಾ.6 ರಂದು ಹಿಂದಕ್ಕೆ ಪಡೆದಿದ್ದ ರಾಜ್ಯ ಸರ್ಕಾರ ಮಾ.7 ರಂದು ವರ್ಗಾವಣೆ ಮಾಡಿತ್ತು. ಒಟ್ಟು 12 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು ರೋಹಿಣಿ ಅವರನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಆದೇಶ ಹೊರಡಿಸಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಜ.22 ರಂದು ರೋಹಿಣಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಕೆಎಸ್‍ಐಐಡಿಸಿ) ಆಡಳಿತ ನಿರ್ದೇಶಕಿಯನ್ನಾಗಿ ನೇಮಿಸಿ ಹಠಾತ್ ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶಕ್ಕೆ ಕೇಂದ್ರ ಚುನಾವಣಾ ಆಯೋಗ ತಡೆ ನೀಡಿತ್ತು. ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಟೀಕೆ ಕೇಳಿ ಬಂದಿತ್ತು.

ಫೆಬ್ರವರಿ 28ಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಮತದಾರ ಪಟ್ಟಿ ಪರಿಷ್ಕರಣೆ ಮುಗಿಯುವವರೆಗೆ ವರ್ಗಾವಣೆ ಬೇಡ. ವರ್ಗಾವಣೆ ಆದೇಶ ಜಾರಿಯನ್ನು ಕೂಡಲೇ ನಿಲ್ಲಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರನ್ನ ಅದೇ ಸ್ಥಾನದಲ್ಲಿ ಮುಂದುವರಿಸಬೇಕು. ವರ್ಗಾವಣೆ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಬೇಕು. ವರ್ಗಾಯಿತ ಜಿಲ್ಲೆಗಳಿಗೆ ತೆರಳದಂತೆ 7 ಜಿಲ್ಲಾಧಿಕಾರಿಗಳಿಗೂ ಚುನಾವಣಾ ಆಯೋಗ ಈ ಹಿಂದೆ ಸೂಚನೆ ನೀಡಿತ್ತು.