ತಾಲ್ಲೂಕು ಕಛೇರಿಗೆ ಜನರೇಟರ್ ಮತ್ತು ಯುಪಿಎಸ್ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

356
firstsuddi

ಚಿಕ್ಕಮಗಳೂರು -ನಗರದ ತಾಲ್ಲೂಕು ಕಛೇರಿಯಲ್ಲಿ ವಿದ್ಯುತ್ ಕಡಿತದ ವೇಳೆ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕಛೇರಿಗೆ ಜನರೇಟರ್ ಮತ್ತು ಯುಪಿಎಸ್ ವ್ಯವಸ್ಥೆ ಕಲ್ಪಿಸುವಂತೆ ನಗರ ಸಭೆ ಸದಸ್ಯರಾದ ತೆರೇಸಾ ಲೋಬೋ ಮತ್ತು ಎಂ.ಮಲ್ಲೇಶ್‍ಸ್ವಾಮಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿದ ತೆರೇಸಾ ಲೋಬೋ ಮತ್ತು ಮಲ್ಲೇಶ್ ಸ್ವಾಮಿ ಈ ಸಂಬಂಧ ಮನವಿ ಸಲ್ಲಿಸಿದರು.ಜಾತಿ, ಆದಾಯ ಧೃಢೀಕರಣ ಪತ್ರ ಸೇರಿದಂತೆ ಹಲವು ಕೆಲಸಗಳಿಗಾಗಿ ಪ್ರತಿನಿತ್ಯ ನೂರಾರು ಸಾರ್ವಜನಿಕರು ತಾಲ್ಲೂಕು ಕಛೇರಿಗೆ ಬರುತ್ತಾರೆ, ಅವರಲ್ಲಿ ಬಹಳಷ್ಟು ಜನ ಗ್ರಾಮೀಣ ಪ್ರದೇಶದವರು, ಮಹಿಳೆಯರು ಮತ್ತು ದೂರದ ಊರಿನಿಂದ ಬಂದಿರುತ್ತಾರೆ ಇತ್ತೀಚೆಗೆ ಪ್ರತಿನಿತ್ಯ ಆಗಾಗ ವಿದ್ಯುತ್ ಕಡಿತವಾಗುತ್ತಿರುವುದರಿಂದಾಗಿ ತಮ್ಮ ಕೆಲಸವಾಗದೆ ಅವರುಗಳು ಪರದಾಡುವಂತಾಗಿದೆ ಎಂದು ಆರೋಪಿಸಿದರು.ಕಛೇರಿಯಲ್ಲಿ ಜನರೇಟರ್ ಮತ್ತು ಯುಪಿಎಸ್ ವ್ಯವಸ್ಥೆ ಇಲ್ಲದಿರುವುದರಿಂದಾಗಿ ಕರೆಂಟ್ ಹೋದ ಸಂದರ್ಭದಲ್ಲಿ ದೂರದ ಊರಿನಿಂದ ಬಂದವರು ಗ್ರಾಮೀಣ ಪ್ರದೇಶದವರು ಮತ್ತು ಸಾರ್ವಜನಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ದೂರಿದರು.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಛೇರಿಗೆ ಜನರೇಟರ್ ಮತ್ತು ಯುಪಿಎಸ್ ವ್ಯವಸ್ಥೆಯನ್ನು ತುರ್ತಾಗಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.