ಚಿಕ್ಕಮಗಳೂರು : ಶಾಸಕ ಸಿ.ಟಿ ರವಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಿಯವರೆಗೂ ಸೂರ್ಯ ಚಂದ್ರರಿರುತ್ತಾರೋ ಅಲ್ಲಿಯವರೆಗೂ ರಾಮಾಯಣ ಇರುತ್ತದೆ. ಎಲ್ಲಿಯವರೆಗೂ ರಾಮಾಯಣವಿರುತ್ತದೋ ಅಲ್ಲಿಯವರೆಗೆ ಮಹರ್ಷಿ ವಾಲ್ಮೀಕಿಯ ನೆನಪು ಅಜರಾಮರವಾಗಿರುತ್ತದೆ. ಉನ್ನತವಾದ ಮಹಾ ಕಾವ್ಯ ಜನರಿಗೆ ದಾರಿದೀಪವಾಗಿದೆ ಎಂದರು.
ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣ ಕೃತಿ ಸಮಾಜದ ಓರೆಕೋರೆಗಳನ್ನು ತಿದ್ದಿ ಆರೋಗ್ಯವಂತ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಅರಣ್ಯ ವಸತಿ ಹಾಗೂ ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು. ಅವರು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮಾಯಣ ಮಹಾಭಾರತವನ್ನು ಓದುತ್ತೇವೆ. ಆದರೆ ಅದನ್ನು ರಚಿಸಿದವರನ್ನು ಮರೆಯುತ್ತಿದ್ದೇವೆ. ಸರ್ಕಾರ ಮಹಾ ಕವಿಗಳ ನೆನಪಿಗಾಗಿ ಒಂದು ದಿನ ರಜೆಯನ್ನು ಘೋಷಿಸಿ ರಾಮಾಯಣದ ಕತೃ ಶ್ರೀ ವಾಲ್ಮೀಕಿ ಮಹರ್ಷಿ ಜಯಂತಿಯನ್ನು ಆಚರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಎಮ್.ಎಲ್.ಎಮ್.ಎನ್ ಶಾಲೆಯ ಶಿಕ್ಷಕ ರುದ್ರಪ್ಪ ನಿಂಗಪ್ಪ ತಳವಾರ ಮಾತನಾಡಿದ ಅವರು, ಪರಿವರ್ತನೆ ಜಗದ ನಿಯಮ ಎಂಬುದನ್ನು ತೋರಿಸಿಕೊಟ್ಟ ವಾಲ್ಮೀಕಿ ಪರಿವರ್ತನೆಯ ಹರಿಕಾರ. ಅವರು ಸಂಸ್ಕೃತಿ ಹರಿಕಾರ, ಶಿಕ್ಷಣ ತಜ್ಙ, ಮಾರ್ಗದರ್ಶಕ, ಪರಿಸರ ಪ್ರೆಮಿ, ಸಮಾಜ ವಿಜ್ಙಾನಿಯಾಗಿದ್ದರು ಎಂದು ಬಂಣ್ಣಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್ ಚೈತ್ರಶ್ರೀ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಹಿಂದು ಧರ್ಮವನ್ನು ಎತ್ತಿ ಹಿಡಿಯುವಂತಹ ಮಹಾ ಕಾವ್ಯವನ್ನು ವಾಲ್ಮೀಕಿ ಅವರು ರಚಿಸಿದರು. ಇಂತವರ ಆದರ್ಶಗಳನ್ನು ನಾವುಗಳು ಪಾಲಿಸಬೇಕೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಸತ್ಯವತಿ, ಅಪರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಸಮನ್ವಯ ಅಧಿಕಾರಿ ಎಂ.ಎಲ್ ಬಿಂದುಮಣಿ ತಾ.ಪಂ. ಉಪಾಧ್ಯಕ್ಷ ವೈ.ವಿ ಸುರೇಶ್, ಜಿ.ಪಂ. ಸದಸ್ಯರುಗಳಾದ ಶಿಲ್ಪಾ ರವಿ, ಪ್ರೇಮಾ ಮಂಜುನಾಥ್, ಉಪಕಾರ್ಯದರ್ಶಿ ರಾಜ್‌ಗೋಪಾಲ್, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಈಶ್ವರ್ ಮುಖಂಡರಾದ ರಾಧಾಕೃಷ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ತಾಲ್ಲೂಕು ಕಚೇರಿ ಆವರಣದಿಂದ ಮಹರ್ಷಿ ವಾಲ್ಮೀಕಿರವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇತರರಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿತ್ತು.