ಮೂಡಿಗೆರೆ : ಪ್ರಕೃತಿಯ ವೈಚಿತ್ರ್ಯವೇ ಹಾಗೆ. ಇಲ್ಲಿನ ಅದೆಷ್ಟೋ ಸತ್ಯಗಳಿಗೆ ಕಾರಣ ಹುಡುಕ ಹೊರಟ್ರೆ ಸೋಲು ಕಟ್ಟಿಟ್ಟ ಬುತ್ತಿ. ಭೂಗರ್ಭದ ಒಡಲಾಳದಲ್ಲಿ ಅಡಗಿರೋ ಒದೊಂದು ಸತ್ಯ ಹೊರಬಂದಾಗ್ಲು ದೇವರಿರೋದು ಸತ್ಯ ಅನ್ಸತ್ತೆ. ಯಾಕಂದ್ರೆ, ಈ ಊರಿನ ಜಾತ್ರೆಯನ್ನ ನೀವು ನೋಡುದ್ರೆ ಪ್ರಕೃತಿಯ ವಿಚಿತ್ರವನ್ನ ಕಂಡು ಮೂಕವಿಸ್ಮಿತರಾಗ್ತಿರಾ. ಹೌದು, ಆ ಹುತ್ತಕ್ಕೆ ಸೂರಿಲ್ಲ. ತಡೆಗೋಡೆಗಳೂ ಇಲ್ಲ. ಆದ್ರು ಮಳೆ-ಗಾಳಿಗೆ ಒಂದಿಂಚು ಕರಗಿಲ್ಲ. ಹುತ್ತದ ಸುತ್ತಲೂ ಕಲ್ಲು-ಸಿಮೆಂಟ್‍ಗಳಿಂದ ಬಂದೋಬಸ್ತ್ ಮಾಡಿದ್ರು ಕೂಡ ದೀಪಾವಳಿ ಅಮಾವಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯ ದಿನ ಮಹಾಮಂಗಳಾರತಿ ವೇಳೆ ಇಲ್ಲಿ ನಡೆಯೋ ವಿಚಿತ್ರವನ್ನ ಕಂಡ್ರೆ ಎಂತಹಾ ನಾಸ್ತಿಕರು ಆಸ್ತಿಕರಾಗ್ತಾರೆ.
ದನ ಕಾಯೋ ಹುಡುಗರು ಕಟ್ಟಿದ ಮಣ್ಣಿನ ಗೂಡು ಇಂದು ಸಾವಿರಾರು ಭಕ್ತರ ಇಷ್ಟದೈವವಾಯ್ತು. ಹೊಯ್ಸಳರ ಕಾಲದಿಂದಲೂ ನಡೆದು ಬರ್ತಿರೋ ಆಚರಣೆಗೆ 400 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ದೀಪಾವಳಿ ಅಮಾವಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯಂದು ನಡೆಯೋ ಉತ್ಸವದಲ್ಲಿ ಮಹಾಮಂಗಳಾರತಿ ವೇಳೆ ಈ ಹುತ್ತಾ 10 ರಿಂದ 15 ಡಿಗ್ರಿ ಅಂತರದಲ್ಲಿ ಅಲುಗಾಡುತ್ತೆ. ಹೌದು, ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಉಣ್ಣಕ್ಕಿ ಉತ್ಸವ. ಈ ಹುತ್ತ ಬರೀ ಮಣ್ಣಿನ ಗೂಡಲ್ಲ. ದೈವಿಶಕ್ತಿಯ ಗುಡಿ. 400 ವರ್ಷಗಳ ಹಿಂದೆ, ಚಿಕ್ಕದ್ದಿದ್ದ ಗೂಡು ಇಂದು 16 ಅಡಿಗೂ ಎತ್ತರ ಬೆಳೆದಿದೆ. ಈ ಹುತ್ತಕ್ಕೆ ಸೂರಿಲ್ಲ. ಮಳೆ-ಗಾಳಿಗೆ ಕರಗಿಲ್ಲ. ವರ್ಷಪೂರ್ತಿ ಮಣ್ಣಿನ ಗೊಂಬೆಯಂತೆ ನಿಂತ ಹುತ್ತ ವರ್ಷಕ್ಕೊಮ್ಮೆ ಭಕ್ತರನ್ನ ಮೂಕವಿಸ್ಮಿತರನ್ನಾಗಿಸುತ್ತೆ. ಈ ಪವಾಡವನ್ನ ನೋಡಲೆಂದು ಬಂದವರು ನಾಗಪ್ಪನ ಭಕ್ತರಾಗಿ ಪ್ರತಿ ವರ್ಷ ಬರ್ತಿದ್ದಾರೆ.
ಉತ್ಸವದಂದು ಯಾವುದೇ ಗಾಯವಾಗದ ಕರುವಿನ ಕಿವಿಯನ್ನ ಕತ್ತರಿಸಿ ದೇವರ ಕರುವೆಂದು ಕಾಡಿಗೆ ಬಿಡ್ತಾರೆ. ಇದರಿಂದ ಊರಿನ ದನಕರುಗಳು ಆರೋಗ್ಯದಿಂದಿದ್ದು, ಯಾವುದೇ ಅನಾಹುತಗಳು ನಡೆಯೋದಿಲ್ಲ ಅನ್ನೋದು ನಂಬಿಕೆ. ದನ ಕಾಯೋ ಹುಡುಗರು ಕಟ್ಟಿದ ಹುತ್ತವಾದ್ರಿಂದ ಕರುವನ್ನ ಕಾಡಿಗೆ ಹೊಡೆಯೋ ಆಚರಣೆ ಬೆಳೆದು ಬಂದಿದೆ. ಉತ್ಸವದ ದಿನ ಕರುವನ್ನ ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ ಹಾಕ್ತೇವೆಂದು ಹರಕೆ ಕಟ್ಟಿಕೊಂಡ್ರೆ ಎಂತಹಾ ಕಷ್ಟವೂ ಕಳೆಯುತ್ತಂತೆ. ಪ್ರತಿವರ್ಷ ದೀಪಾವಳಿಯ ನಂತರದ ಮಕ್ಕಳ ಹುಣ್ಣಿಮೆಯ ಗುರುವಾರ ಅಥವಾ ಭಾನುವಾರ ಈ ಉತ್ಸವ ನಡೆಯಲಿದೆ. ಚರ್ಮರೋಗ, ಮಕ್ಕಳಾಗದವರು, ದನಕರು ಸಾಯ್ತಿದ್ರೆ ಅಥವಾ ಆರೋಗ್ಯ ಹದಗೆಟ್ತಿದ್ರೆ ಇಲ್ಲಿಗೆ ಹರಕೆ ಕಟ್ಟಿದ್ರೆ ಸಾಕು ವರ್ಷದೊಳಗೆ ಆ ಹರಕೆ ಈಡೇರೋದ್ರಿಂದ ಸುತ್ತಮುತ್ತಲಿನ ಜಿಲ್ಲೆಯ ಜನರು ಈ ನಾಗಪ್ಪನ ಮಾಯೆಗೆ ಬೆರಗಾಗಿದ್ದಾರೆ.
ತರ್ಕಕ್ಕೆ ನಿಲುಕದ ಈ ಗ್ರಾಮದ ಉತ್ಸವ ಇಂದಿಗೂ ಪ್ರಶ್ನಾತೀತ. ಹುತ್ತ ಅಲುಗಾಡೋದ್ರ ಹಿಂದೆ ವೈಜ್ಞಾನಿಕ ಕಾರಣವಿದ್ಯೋ ಅಥವಾ ದೈವಿಶಕ್ತಿಯ ಪ್ರಭಾವವಿದ್ಯೋ ಅನ್ನೋದು ಇಂದಿಗೂ ನಿಗೂಢ. ದನಕಾಯೋ ಹುಡುಗರ ಭಕ್ತಿಯ ಹಿಂದಿರೋ ಈ ಹುತ್ತಾ ಅಲುಗಾಡುತ್ತ ಪವಾಡವನ್ನೇ ಸೃಷ್ಟಿಸಿದ್ರೆ, ಹುತ್ತ ಅಲುಗಾಡೋದ್ರ ಬಗ್ಗೆ ಆಸ್ತಿಕ ಹಾಗೂ ನಾಸ್ತಿಕರಲ್ಲಿ ಹಲವು ವಾದಗಳಿಗೆ. ಆದ್ರೆ, ನೋಡುಗರ ಕಣ್ಮುಂದೆ ನಡೆಯೋ ಈ ವಿಚಿತ್ರ ಹಾಗೂ ವಿಶಿಷ್ಠ ಪವಾಡ ಮಾತ್ರ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದೆ.