ಬೆಂಗಳೂರು : ಜಮೀರ್ ಅಹಮದ್ ಗೆ ನೈತಿಕತೆ ಇದ್ದರೆ ಜೆಡಿಎಸ್’ಗೆ ರಾಜೀನಾಮೆ ನೀಡಿ, ಆಮೇಲೆ ನಮ್ಮ ಮೇಲೆ ಬಾಣ ಬಿಡಲಿ. ಜೆಡಿಎಸ್ ವಿರುದ್ಧ ಮತ ಹಾಕಿದಾಗ್ಲೇ ಅವರು ರಾಜೀನಾಮೆ ನೀಡಬೇಕಿತ್ತು, ಅವರು ತಿಂತಿರೋದು ಜೆಡಿಎಸ್ ಅನ್ನ ಎಂದು ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಅವರು ನನ್ನ ವಿರುದ್ಧ ಮೀಟರ್ ತೋರಿಸೋ ಅಗತ್ಯವಿಲ್ಲ. ಕಾಂಗ್ರೆಸ್ ಮೀಟರ್ ಕಮ್ಮಿಯಾಗಿದೆ ಅಲ್ಲಿ ತೋರಿಸಲಿ ಎಂದು ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿಗೆ ಟೋಪಿ ಹಾಕಿದವರು ಅವರು. ಅವರಿಗೆ ತಾಕ್ಕತ್ತಿದ್ದರೆ ಹುಟ್ಟೂರು ಕುಣಿಗಲ್ ನಲ್ಲಿ ಸ್ಪರ್ಧಿಸಲಿ. ನನ್ನ ಹುಟ್ಟೂರಿನಲ್ಲಿ ನಾನು ಸ್ಪರ್ಧಿಸ್ತೇನೆ ಅಂದ್ರು. ಅವರು ಮಂತ್ರಿ ಮಾಡಿದ ಕುಮಾರಸ್ವಾಮಿಗೆ ಮೋಸ ಮಾಡಿದ್ದಾರೆ. ಇಂತವರನ್ನ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಮುನ್ನ ಜಿ.ಪರಮೇಶ್ವರ್ ಯೋಚಿಸಬೇಕಿತ್ತು ಎಂದಿದ್ದಾರೆ. ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ನನಗೆ ವ್ಯಥೆಯಾಗ್ತಿದೆ. ನಾನು ದೇವೇಗೌಡರು ಹೇಳಿದಂತೆ ಕೇಳಿಕೊಂಡಿರುತ್ತೇನೆ ಎಂದು ಹೇಳಿದ್ದಾರೆ.