ಶಿವಮೊಗ್ಗ : ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲೆಡೆ ಆಪರೇಷನ್ ಕಮಲ ನಡೆಯುತ್ತಿದೆ. ರಾಜ್ಯದಲ್ಲೂ ಆಪರೇಷನ್ ಕಮಲದ ಮೂಲಕವೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕೋರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತೆಲಂಗಾಣ ಕರ್ನಾಟಕದಲ್ಲೂ ಆಪರೇಷನ್ ಕಮಲ ನಡೆದಿದೆ. ಇದು ಮನಿ ಲ್ಯಾಂಡಿಂಗ್ ಕಾಯ್ದೆ ಅಡಿಯಲ್ಲಿ ಬರುತ್ತದೆ. ಪಿಎಂಎಲ್ ಆಕ್ಟ್ ಅಡಿ ಬರುವುದರಿಂದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳೇ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸತ್ಯಾಸತ್ಯಗಳನ್ನ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಅವರ ಮನೆ ಅವರು ಮೊದಲು ರಿಪೇರಿ ಮಾಡಿಕೊಳ್ಳಲಿ. ಅವರ ಸರ್ಕಾರವೇ ಕಲುಷಿತವಾಗಿದೆ. ನಮ್ಮದು 3 ಬಾಗಿಲು ಆದರೆ, ಬಿಜೆಪಿಯವರದ್ದು ಮನೆಯೊಂದು 12 ಬಾಗಿಲು ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅ.6 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಖರ್ಗೆ ಅವರಿಗೆ ಅದ್ಧೂರಿ ಸ್ವಾಗತಕ್ಕೆ ಎಲ್ಲಾ ತಯಾರಿ ನಡೆಸುತ್ತಿದ್ದೇನೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಖರ್ಗೆ ಸ್ವಾಗತಕ್ಕೆ ಬೆಂಗಳೂರಿಗೆ ಬರಬೇಕು. ಇನ್ನು 3 ದಿನದಲ್ಲಿ ಚುನಾವಣೆ ದೃಷ್ಟಿಯಿಂದ ಮಹತ್ವದ ನಿರ್ಣಯ ಪ್ರಕಟಿಸುತ್ತೇನೆ ಎಂದು ತಿಳಿಸಿದರು.
ಈಶ್ವರಪ್ಪನಿಂದಾಗಿ ಶಿವಮೊಗ್ಗದಲ್ಲಿ ಗಲಾಟೆ ಆಗುತ್ತಿದೆ. ಶಿವಮೊಗ್ಗದ ಗಲಾಟೆಯಿಂದಾಗಿ ಇಲ್ಲಿ ಯಾರು ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ತಾಕತ್ ಇದ್ದರೆ ಶಿವಮೊಗ್ಗದಲ್ಲಿ ಉದ್ದಿಮೆದಾರರನ್ನು ಕರೆತಂದು ಹೂಡಿಕೆ ಮಾಡಲಿ ಎಂದು ಹೇಳಿದರು.










