ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ, ಬಂಧಿಸಬೇಕು : ಡಿಕೆಶಿ.

50
firstsuddi

ಬೆಂಗಳೂರು : ಈಶ್ವರಪ್ಪ ರಾಜೀನಾಮೆ ನಮ್ಮ ಆದ್ಯತೆ ಆಗಿರಲಿಲ್ಲ. ಈಗಲೂ ಅವರು ರಾಜೀನಾಮೆ ಕೊಡ್ತಾರಾ ಅನ್ನೋದು ನನಗೆ ಡೌಟ್ ಇದೆ. ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿ ಕೇಸ್ ದಾಖಲಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ವಿಧಾನಸೌಧದ ಪೂರ್ವ ದ್ವಾರದ ಬಳಿ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದೆ. ಇಂದು ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ, ಸಂತೋಷ ಪಾಟೀಲ್ ಸಹೋದರ ಏನ್ ಬೇಡಿಕೆ ಇಟ್ಟಿದ್ದಾರೆ ಮೊದಲು ಆ ಕೆಲಸ ಆಗಬೇಕು. ರಾಜೀನಾಮೆ ಅದೆಲ್ಲ ಗೊತ್ತಿಲ್ಲ. ಈಶ್ವರಪ್ಪ ಅವರ ಬಂಧನವಾಗಬೇಕು. ಸಂತೋಷ ಅವರ ಪತ್ನಿಗೆ ಕೆಲಸ ಕೊಡಬೇಕು. ಭ್ರಷ್ಟಾಚಾರದ ಆರೋಪದಡಿ ಎಫ್ ಐಆರ್ ಹಾಕಿ ಈಶ್ವರಪ್ಪನವರನ್ನ ಬಂಧಿಸಬೇಕು. ‘ಈಶ್ವರಪ್ಪ ಒಬ್ಬ ಸುಳ್ಳಿನ ಫ್ಯಾಕ್ಟರಿ ಚೇರ್ಮನ್’ ಇದ್ದಂತೆ. 24 ಗಂಟೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದು, ಅಂತೆಯೇ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಪೊಲೀಸರಿಗೆ ಕೆಲಸ ಮಾಡುವುದಕ್ಕೆ ಬಿಡುತ್ತಿಲ್ಲ. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನನಗೆ ಬಹಳಷ್ಟು ಗೌರವವಿದೆ. ಆದರೆ ಸಿಎಂ ಬೊಮ್ಮಾಯಿ ಕಪ್ಪು ಚುಕ್ಕೆ. ಕೆಂಪಣ್ಣ ಕೊಟ್ಟಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆದಿದ್ದರೆ ಇಂತಹ ಪರಿಸ್ಥಿತಿ ಬರ್ತಿರಲಿಲ್ಲ. ಕೆಲವು ಕಡೆಗಳಲ್ಲಿ 100% ಕಮಿಷನ್ ಇದೆ. ಆ ಬಗ್ಗೆ ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ವಿಧಾನಸೌಧದ ಗೋಡೆಗೆ ಹೊಡೆದರೆ ಕಾಸು ಕಾಸು ಕಾಸು ಎನ್ನುತ್ತದೆ ಎಂದು ವಿಧಾನಸೌಧದ ಗೋಡೆಗೆ ಹೊಡೆದು ತೋರಿಸಿದ ಡಿಕೆಶಿ, ಬಿಜೆಪಿ ಕಾರ್ಯಕಾರಣಿ ನಡೆಯುವಲ್ಲಿಯೂ ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಾರೆ. ಇದೊಂದು ನಿರಂತರ ಹೋರಾಟ ಎಂದರು.