ಕೊನೆಗೂ ಪೊಲೀಸ್ ಬಲೆಗೆ ಬಿದ್ದ ಸ್ಯಾಂಟ್ರೋ ರವಿ.

60
firstsuddi

ಮೈಸೂರು : ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

ಸ್ಯಾಂಟ್ರೋ ರವಿ ವಿರುದ್ಧ 2ನೇ ಪತ್ನಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಸ್ಯಾಂಟ್ರೋ ರವಿ ತಲೆಮರೆಸಿಕೊಂಡಿದ್ದ. ಸ್ಯಾಂಟ್ರೋ ರವಿ ಸೆರೆಗೆ ನಾಲ್ವರು ಎಸ್ ಪಿಗಳ ವಿಶೇಷ ತಂಡ ರಾಮನಗರ, ಮಂಡ್ಯ, ಮೈಸೂರು, ಕೇರಳದಲ್ಲಿ ಕಾರ್ಯಚರಣೆ ಮಾಡಿತ್ತು. ಅಂತಿಮವಾಗಿ ಗುಜರಾತ್ ನಲ್ಲಿ ಇರುವುದು ಸಿಕ್ಕ ಸುಳಿವಿನ ಮೇರೆಗೆ ರಾಜ್ಯ ಪೊಲೀಸರ ವಿಶೇಷ ತಂಡ ಕಾರ್ಯಚರಣೆ ನಡೆಸಿ ಅಡಗಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಸ್ಯಾಂಟ್ರೋ ರವಿಯನ್ನು ಕರ್ನಾಟಕಕ್ಕೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ.

ಸ್ಯಾಂಟ್ರೋ ರವಿ ಯಾರು? : ಸ್ಯಾಂಟ್ರೋ ರವಿ ಮಾಂಸ ದಂಧೆಯ ಕಿಂಗ್ ಪಿನ್. ಈತ ಹಲವು ರಾಜಕಾರಣಿಗಳ ನಂಟು ಬೆಳೆಸಿ ಹೆಣ್ಣು ಮಕ್ಕಳನ್ನು ಬಳಸಿಕೊಂಡು ‘ಮಾಂಸ ದಂಧೆ’ ನಡೆಸುತ್ತಿದ್ದ ಎಂಬ ಆರೋಪವಿದೆ. ಮೂಲತಃ ಮಂಡ್ಯದವನಾದ ಸ್ಯಾಂಟ್ರೋ ರವಿ, ಮೊದಲಿಗೆ ಮೈಸೂರಿನಲ್ಲಿ ತನ್ನ ದಂಧೆ ಶುರು ಮಾಡಿದ್ದ. ಸ್ಯಾಂಟ್ರೋ ಕಾರ್ ನಲ್ಲೇ ಈತ ಡೀಲ್ ಕುದುರಿಸುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಈತನಿಗೆ ಸ್ಯಾಂಟ್ರೋ ರವಿ ಎಂಬ ಅಡ್ಡ ಹೆಸರು ಬಂದಿತ್ತು.

ನಂತರ ಈತನ ಕಾರ್ಯ ಸ್ಥಾನ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಕುಮಾರ ಕೃಪಾ ಗೆಸ್ಟ್ ಹೌಸ್ ನಲ್ಲೇ ರಾಜಕಾರಣಿಗಳ ಶ್ರೀರಕ್ಷೆಯೊಂದಿಗೆ ಈತ ದಂಧೆ ನಡೆಸುತ್ತಿದ್ದ ಎಂಬ ಆರೋಪವಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲೂ ಸ್ಯಾಂಟ್ರೋ ರವಿ ಹೆಸರು ಕೇಳಿಬಂದಿತ್ತು. ಬಿಜೆಪಿ ಸಚಿವರ ಜೊತೆ ಕಾಣಿಸಿಕೊಂಡಿರುವ ಫೋಟೋಗಳು ಕೂಡ ವೈರಲ್ ಆಗಿದ್ದವು. ಇದೀಗ ಸ್ಯಾಂಟ್ರೋ ರವಿಯ ಬಂಧನವಾಗಿದ್ದು, ಆತನ ವಿಚಾರಣೆ ವೇಳೆ ಸ್ಫೋಟಕ ಸಂಗತಿಗಳು ಬಯಲಾಗುವ ಸಾಧ್ಯತೆ ಇದೆ.