ಕೊಪ್ಪ :ಜಾತಿ ಪ್ರಮಾಣ ಪತ್ರ ತಿರಸ್ಕಾರ: ಪ್ರಜಾಸೇವಾ ಸಭೆಯಲ್ಲಿ ಅಧಿಕಾರಿಗೆ ಶಾಸಕರ ತರಾಟೆ

4

ಕೊಪ್ಪ: ನಿವೃತ್ತ ಯೋಧರೊಬ್ಬರ ಜಾತಿ ದೃಢೀಕರಣ ಪ್ರಮಾಣ ಪತ್ರದ ಅರ್ಜಿಯನ್ನು ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿ ಕೊಪ್ಪ ಪಟ್ಟಣದ ಪುರಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಹೈಡ್ರಾಮಾ ನಡೆಯಿತು.
ಹರಂದೂರು ಗ್ರಾಮ ಲೆಕ್ಕಾಧಿಕಾರಿ ನೇಸರ್ ಅವರು ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಕಾರಣವೇನು ಎಂದು ಶಾಸಕ ರಾಜೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳ್ಳಿ ಕೂಡ ಅಧಿಕಾರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.
ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಶಾಸಕ ರಾಜೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಲಂಚ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆಯಾ? ಕತ್ತೆ ಕಾಯ್ತಿದ್ದೀರಾ?” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದರಿಂದ ಆಕ್ರೋಶಗೊಂಡ ಗ್ರಾಮ ಲೆಕ್ಕಾಧಿಕಾರಿ ನೇಸರ್, ತಹಶೀಲ್ದಾರ್ ಎದುರಲ್ಲೇ “ನನ್ನನ್ನು ಸಸ್ಪೆಂಡ್ ಮಾಡಿ” ಎಂದು ಹೇಳಿ ಸಭೆಯಿಂದ ಹೊರನಡೆದರು ಎನ್ನಲಾಗಿದೆ.
ಅಧಿಕಾರಿಯ ವರ್ತನೆಗೆ ಶಾಸಕರು ಹಾಗೂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ತವ್ಯಲೋಪ ಎಸಗಿರುವ ಆರೋಪದಡಿ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.