ಉಡುಪಿ : ಕೊರಗ ಸಮುದಾಯದ ಯುವಕನ ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮದುವೆ ಸಮಾರಂಭ ನಡೆಯುತ್ತಿದ್ದ ಮನೆಗೆ ನುಗ್ಗಿದ ಕೋಟ ಪೊಲೀಸರು ಮದುಮಗ ಸೇರಿದಂತೆ ಹಲವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕೋಟ ಪಿಎಸ್ಐ ಸಂತೋಷ್ ಬಿ ಪಿ ಅವರನ್ನು ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಅವರು ಆದೇಶ ಹೊರಡಿಸಿದ್ದಾರೆ.
ಸೋಮವಾರ ರಾತ್ರಿ ಕೊಟ್ಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿದ್ದಾರೆ ಎಂಬ ಸಾರ್ವಜನಿಕರ ದೂರಿನ ಅನ್ವಯ ತೆರಳಿದ್ದ ಪಿಎಸ್ ಐ ಮತ್ತವರ ತಂಡ ಅಲ್ಲಿದ್ದ ಜನರ ಮೇಲೆ ಲಾಠಿ ಪ್ರಹಾರ ನಡೆಸಿದ್ದು ಘಟನೆಯಲ್ಲಿ ಮದುಮಗ ಸೇರಿ ಹಲವರು ಗಾಯಗೊಂಡಿದ್ದರು. ಪೊಲೀಸರ ದೌರ್ಜನ್ಯದ ಕುರಿತು ರಾಜ್ಯದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಡಿವೈಎಸ್ಪಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ತನಿಖೆಗೆ ಆದೇಶ ನೀಡಿದ್ದು ಅದರ ಬೆನ್ನಲ್ಲೇ ಪಶ್ಚಿಮ ವಲಯ ಐಜಿಪಿ ಜ್ಯೋತಿ ಪ್ರಕಾಶ್ ರೈ ಅವರು ಪಿಎಸ್ಐ ಅವರನ್ನು ಅಮಾನತು ಮಾಡಿ ಉಳಿದ ಐವರು ಪೊಲೀಸರಿಗೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡುವಂತೆ ಆದೇಶ ನೀಡಿದ್ದಾರೆ.










