ಬೆಂಗಳೂರು: ಮಹಿಳೆಯೊಬ್ಬಳು ವಕೀಲರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯದಲ್ಲಿ ನಡೆದಿದೆ.
ಕೃಷ್ಣಾ ರೆಡ್ಡಿ ಹಲ್ಲೆಗೊಳಗಾದ ವಕೀಲ. ಮೂರು ವರ್ಷಗಳ ಹಿಂದೆ ಹರೀಶ್ ಎಂಬ ವ್ಯಕ್ತಿಯಿಂದ 5 ಲಕ್ಷ ಹಣ ಪಡೆದಿದ್ದ ಕಾಂಚನಾ ವಾಪಸ್ ನೀಡಿರಲಿಲ್ಲ. ಹಣ ವಾಪಸ್ ನೀಡುವುದಾಗಿ ಹೇಳುತ್ತಿದ್ದ ಕಾಂಚನಾ ಚೆಕ್ ಕೂಡ ನೀಡಿದ್ದಳು. ಆದರೆ ಈ ಚೆಕ್ ಬೌನ್ಸ್ ಆಗಿರುವ ಹಿನ್ನೆಲೆ ದೂರು ಕೂಡ ದಾಖಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾದ ನಂತರ ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಆಯ್ಕೆ ಮಾಡಿಕೊಳ್ಳುವ ಬದಲು ಪ್ರಕರಣದ ವಿರುದ್ಧ ಹೋರಾಡುವ ವಕೀಲರ ನಿರ್ಧಾರವನ್ನು ವಿರೋಧಿಸಿ ಆಕೆ ಕಾಯುತ್ತಿದ್ದು, ವಾದವಿವಾದದ ಸಮಯದಲ್ಲಿ ಅವಳು ಇದ್ದಕ್ಕಿದ್ದಂತೆ ಚಾಕು ಹೊರತೆಗೆದು ವಕೀಲರ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗುತ್ತಿದೆ.
ಶಂಕಿತ ಮಹಿಳೆ ಕಾಂಚನಾ, ರೆಡ್ಡಿಯ ಮುಖದ ಎಡಭಾಗದ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಹಲ್ಲೆಗೊಳಗಾದ ವಕೀಲ ಕೃಷ್ಣಾ ರೆಡ್ಡಿ, ಸಮೀಪದ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದಿದ್ದು, ಘಟನೆ ನಂತರ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.










