ಚಿಕ್ಕಮಗಳೂರು: ನಗರದ ಪೋಲೀಸ್ ಮುಖ್ಯಾಧಿಕಾರಿಗಳ ಕಛೇರಿ ಎದುರು ನಿರ್ಮಿಸುತ್ತಿರುವ ವೃತ್ತಕ್ಕೆ ಐಪಿಎಸ್ ಅಧಿಕಾರಿ ದಿ|| ಮಧುಕರ ಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡುವಂತೆ ಬಿಎಸ್‍ಪಿ ನಗರ ಘಟಕ ನಗರಸಭೆಯನ್ನು ಒತ್ತಾಯಿಸಿದೆ.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅವರ ನೇತೃತ್ವದಲ್ಲಿ ನಗರಸಭೆ ಆಯುಕ್ತ ಬಸವರಾಜ್ ಅವರನ್ನು ಸೋಮವಾರ ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ದಿ|| ಮಧುಕರ ಶೆಟ್ಟಿ ಅವರು ಜನಾನುರಾಗಿ, ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಯಾಗಿದ್ದರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು, ಅವರು ತಮ್ಮ ಸೇವಾವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಶಿಸ್ತು, ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಹೆಸರಾಗಿದ್ದರು ಎಂದು ತಿಳಿಸಿದರು.
ದಿ|| ಮಧುಕರ ಶೆಟ್ಟಿ ಅವರ ಹೆಸರು ಮತ್ತು ಕಾರ್ಯನಿಷ್ಠೆ ಇಂದಿಗೂ ಜಿಲ್ಲೆಯ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದ ಪದಾಧಿಕಾರಿಗಳು ಅದನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ವೃತ್ತಕ್ಕೆ ಅವರ ಹೆಸರನ್ನೇ ಇಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ನಗರಸಭೆ ಆಯುಕ್ತ ಬಸವರಾಜು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಿಎಸ್‍ಪಿ ನಗರ ಘಟಕದ ಅಧ್ಯಕ್ಷ ಹನುಮಂತರಾಯ, ಪ್ರಧಾನ ಕಾರ್ಯದರ್ಶಿ ವಿನೂತ್, ಜಿಲ್ಲಾ ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಕಾರ್ಯದರ್ಶಿ ಸವಿತಾ, ಕೆ.ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ವಸಂತ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು:ಪೋಲೀಸ್ ಮುಖ್ಯಾಧಿಕಾರಿಗಳ ಕಛೇರಿ ಎದುರಿನ ವೃತ್ತಕ್ಕೆ ಐಪಿಎಸ್ ಅಧಿಕಾರಿ ದಿ|| ಮಧುಕರ ಶೆಟ್ಟಿ ಅವರ ಹೆಸರನ್ನು...










