ಚಿಕ್ಕಮಗಳೂರು : ಇಂದಿನ ಯುವಪೀಳಿಗೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು : ಹಿರಿಗಯ್ಯ.

286
firstsuddi

ಚಿಕ್ಕಮಗಳೂರು : ಇಂದಿನ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ಹೊರಬಂದು ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ಸಲಹೆ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ನಮ್ಮಸಂಸ್ಕೃತಿಯ ತಾಯಿ ಬೇರು ಅದನ್ನು ಯಾವುದೇ ಕಾರಣಕ್ಕೂ ನಾಶವಾಗಲು ಬಿಡಬಾರದು, ಜಾನಪದವನ್ನು ಕಳೆದುಕೊಂಡರೆ ನಾವು ನಮ್ಮತನವನ್ನು ಕಳೆದುಕೊಂಡು ಪ್ರಪಂಚದೆದುರು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಧಾನ ಉಪನ್ಯಾಸ ನೀಡಿದ ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ಬ್ರಿಟನ್ನಿನ ಪ್ರಾಚೀನ ಆನ್ವೇಷಕ ವಿಲಿಯಂ ಜಾನ್ ಥಾಮ್ಸ್ 1846 ರ ಆಗಸ್ಟ್ 22 ರಂದು ಜಾನಪದವನ್ನು ಫೋಕ್‍ಲೋರ್ ಎಂದು ಹೆಸರಿಸಿದ ಹಿನ್ನೆಲೆಯಲ್ಲಿ ವಿಶ್ವ ಜಾನಪದ ದಿನ ಆಚರಣೆಗೆ ಬಂದಿತು ಎಂದು ತಿಳಿಸಿದರು.
ಅನ್ವೇಷಕ ಥಾಮ್ಸ್ ಅವರು ಜಾನಪದ ಶಾಸ್ತ್ರ ಅದರ ಸ್ವರೂಪ, ಸ್ಥಿತಿ, ವೈವಿಧ್ಯ ಮತ್ತು ಸಂಬಂಧವನ್ನು ಸೂಕ್ಷ್ಮವಾಗಿ ವಿವರಿಸಿ ಪರಂಪರೆಯಿಂದ ಬಂದಿರುವ ಜಾನಪದ ಸಾಹಿತ್ಯವನ್ನು ಸಂಗ್ರಹಿಸುವಂತೆ ಮನವಿ ಮಾಡಿದ್ದರ ಫಲವಾಗಿ ಜಗತ್ತಿನಲ್ಲಿ ಜಾನಪದದ ಅಧ್ಯಯನ ಗಂಭೀರವಾಗಿ ನಡೆಯಲಾರಂಭಿಸಿತು ಎಂದು ಹೇಳಿದರು.
ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಮಾತನಾಡಿ ಇಂದಿನ ಯುವಪೀಳಿಗೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ಮಾತ್ರ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಕಲಾವಿದ ಬಿಳಗಲಿ ನಾಗರಾಜ್ ಅವರಿಂದ ಕೊಳಲು ವಾದನ, ಗಾಯಕರಾದ ಜಿ.ಬಿ.ಸುರೇಶ್, ಜ್ಯೋತಿ ವಿನೀತ್‍ಕುಮಾರ್ ಮತ್ತು ಚಂದ್ರಶೆಟ್ಟಿ ಅವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು.
ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಹನಿರ್ದೇಶಕ ಹೆಚ್.ಡಿ.ರೇವಣ್ಣ, ವಿದ್ಯಾರ್ಥಿ ನಿಲಯದ ವಾರ್ಡನ್ ಶ್ರೀಲತಾ, ಉಪನ್ಯಾಸಕ ಜಿ.ಬಿ.ವಿರೂಪಾಕ್ಷ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು, ಸಂಧ್ಯಾ ಸ್ವಾಗತಿಸಿದರು, ಚಂದ್ರಶೆಟ್ಟಿ ವಂದಿಸಿದರು.