ಚಿಕ್ಕಮಗಳೂರು : ದೇಶದ ಪ್ರತಿ ಪ್ರಜೆಯೂ ಸ್ವಯಂ ಪ್ರೇರಿತವಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು : ಡಾ|| ಡಿ.ಎಲ್. ವಿಜಯ್‍ಕುಮಾರ್.

108
firstsuddi

ಚಿಕ್ಕಮಗಳೂರು : ರಾಷ್ಟ್ರವನ್ನು ಕೊರೊನಾ ಮಹಾಮಾರಿಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ದೇಶದ ಪ್ರತಿ ಪ್ರಜೆಯೂ ಸ್ವಯಂ ಪ್ರೇರಿತವಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್. ವಿಜಯ್‍ಕುಮಾರ್ ಸಲಹೆ ಮಾಡಿದರು.

ನಗರದ ಎಂ.ಇ.ಎಸ್. ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ಇಂದು ನಡೆದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ ಅನೇಕ ಕುಟುಂಬಗಳನ್ನು ಬೀದಿಪಾಲು ಮಾಡಿದೆ. ವೈದ್ಯರು, ವಿಜ್ಞಾನಿಗಳು, ಸರ್ಕಾರಗಳು ಶತಪ್ರಯತ್ನ ಮಾಡಿದರೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ವಿಷಾಧಿಸಿದರು.

ಕೊರೊನಾ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೋವಿಡ್ ಲಸಿಕೆ ಹಾಕಿಸಿ ಕೊಳ್ಳುವುದೊಂದೇ ನಮಗಿರುವ ಏಕೈಕ ಮಾರ್ಗ. ಅದನ್ನು ಎಲ್ಲರೂ ಪಡೆದುಕೊಳ್ಳುವುದರಿಂದ ದೇಶವನ್ನು ಮಹಾಮಾರಿಯಿಂದ ಮುಕ್ತಗೊಳಿಸಬಹುದು ಹಾಗಾಗಿ ಪ್ರತಿಯೊಬ್ಬರೂ ಹಿಂಜರಿಕೆ ಬಿಟ್ಟು ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಸೀಮಾ ಮಾತನಾಡಿ ವಿದ್ಯಾರ್ಥಿಗಳು ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುವುದರ ಜೊತೆಗೆ ತಮ್ಮ ಕುಟುಂಬ ಮತ್ತು ಸುತ್ತಮುತ್ತಲಿನವರಿಗೂ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಆಯ್ಕೆಶ್ರೇಣಿ ಉಪನ್ಯಾಸಕ ಮಂಜುನಾಥ ಭಟ್ ಇಂದು ಬಿ.ಎ., ಬಿಎಸ್ಸಿ ಮತ್ತು ಎಂ.ಕಾಂ.ನ 300 ವಿದ್ಯಾರ್ಥಿಗಳಿಗೆ ಹಾಗೂ ನಾಳೆ ಉಳಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೂ ಕೋವಿಡ್ ಲಸಿಕೆ ಹಾಕಲಿದ್ದು ಎಲ್ಲರೂ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯೆ ಸಾವಿತ್ರಿ, ಕಛೇರಿಯ ವ್ಯವಸ್ಥಾಪಕಿ ಲಕ್ಷ್ಮೀ, ಕಾರ್ಯಕ್ರಮಾಧಿಕಾರಿ ಜೀವರಾಜ್ ಉಪಸ್ಥಿತರಿದ್ದರು.