ಚಿಕ್ಕಮಗಳೂರು : ಯೂ ಟರ್ನ್ ಸ್ಥಳಗಳಲ್ಲಿ ಕನಿಷ್ಠ 50 ಅಡಿ ದೂರ ವಾಹನ ನಿಲುಗಡೆ ನಿಷೇಧಿಸುವಂತೆ ಒತ್ತಾಯ…

63
firstsuddi

ಚಿಕ್ಕಮಗಳೂರು : ನಗರದ ರಸ್ತೆಗಳಲ್ಲಿನ ಯೂ ಟರ್ನ್ ಸ್ಥಳಗಳಲ್ಲಿ ಕನಿಷ್ಠ 50 ಅಡಿ ದೂರ ವಾಹನ ನಿಲುಗಡೆ ನಿಷೇಧಿಸುವಂತೆ ತಾಲ್ಲೂಕು ಲಾರಿ ಮಾಲೀಕರ ಸಂಘ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಅವರನ್ನು ನಿನ್ನೆ ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ನಗರದ ರಸ್ತೆಗಳಲ್ಲಿ ಯೂ ಟರ್ನ್ ತೆಗೆದುಕೊಳ್ಳುವ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಇರುವುದರಿಂದ ಭಾರೀ ವಾಹನಗಳ ಚಾಲಕರು ಸರಾಗವಾಗಿ ಯೂ ಟರ್ನ್ ತೆಗೆದುಕೊಳ್ಳಲಾಗದೆ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.

ನಗರದ ಆಸ್ಪತ್ರೆ, ಚರ್ಚ್, ದೇವಾಲಯ, ಮಸೀದಿ, ಕೋರ್ಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಾಹನಗಳು ಹಾರ್ನ್ ಮಾಡುವುದನ್ನು ನಿಷೇಧಿಸಬೇಕು. ಈ ಕುರಿತು ನಾಮಫಲಕಗಳನ್ನು ಅಳವಡಿಸಬೇಕು ಎಂದು ಹೇಳಿದರು.

ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಬಾಡಿಗೆ ವಾಹನಗಳು ಕಡ್ಡಾಯವಾಗಿ ಯೆಲ್ಲೋ ಬೋರ್ಡ್ ಪರವಾನಗಿ ಪಡೆದುಕೊಳ್ಳಲು ಆದೇಶಿಸಬೇಕು ಎಂದು ತಿಳಿಸಿದರು.

ಮಲ್ಲಂದೂರು ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧವಿರುವ ಸ್ಥಳಗಳಲ್ಲಿ ಖಾಸಗಿಯವರು ಅಕ್ರಮವಾಗಿ ಬ್ಯಾರೀಕೇಡ್ ಹಾಕಿಕೊಂಡಿರುವುದನ್ನು ತೆರವುಗೊಳಿಸಬೇಕು. ಶ್ರೀ ಕತ್ರಿಮಾರಮ್ಮ ದೇವಾಲಯದ ಬಳಿ ಭಾರೀ ವಾಹನಗಳ ನಿಲುಗಡೆಯನ್ನು ನಿಷೇಧಿಸಿರುವ ನಾಮಫಲಕಗಳನ್ನು ಹಾಕಬೇಕು ಎಂದು ಆಗ್ರಹಿಸಿದರು.

ಲಾರಿ ಮಾಲೀಕರ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಾನಾಯಕ್, ಉಪಾಧ್ಯಕ್ಷ ಪಿ.ಕುಮಾರ್, ಪದಾಧಿಕಾರಿಗಳಾದ ಇರ್ಫಾನ್ ಪಾಷಾ, ಆರಿಫ್, ವಾಜಿದ್, ಹಬೀಬ್, ಶಿವಣ್ಣ ಹಾಜರಿದ್ದರು.