ಜ್ಯೂನಿಯರ್ ಬಾಲಯ್ಯ ಎಂದೇ ಖ್ಯಾತರಾಗಿದ್ದ ತಮಿಳಿನ ಹೆಸರಾಂತ ನಟ ರಘು ಬಾಲಯ್ಯ ಅವರು ಇಂದು ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಚೆನ್ನೈನ ವಲಸರವಕ್ಕಂನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೆಸರಾಂತ ಹಿರಿಯ ನಟ ಟಿ.ಎಸ್. ಬಾಲಯ್ಯ ಅವರ ಪುತ್ರರಾಗಿದ್ದ ರಘು ಅವರಿಗೆ 70 ವರ್ಷ ವಯಸ್ಸಾಗಿತ್ತು. 1975ರಲ್ಲಿ ಮೇಲ್ನಾಟ್ಟು ಮರುಮಗಳು ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಘು ಬಾಲಯ್ಯ, ಆ ನಂತರ ಕರಗಟ್ಟಕಾರನ್, ಸುಂದರ ಕಾಂಡಂ, ವಿಜೇತ, ಸಾತ್ತೈ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾ ಮಾತ್ರವಲ್ಲದೆ ‘ಚಿತಿ’, ‘ವಾಝ್ಕೈ’ ಮತ್ತು ‘ಚಿನ್ನ ಪಾಪ ಪೆರಿಯ ಪಾಪಾ’ ಸೀರಿಯಲ್‌ಗಳಲ್ಲಿ ಬಾಲಯ್ಯ ನಟಿಸಿದ್ದಾರೆ.
ಅಜಿತ್ ನಟನೆಯ ನೇರಕೊಂಡ ಸಿನಿಮಾದಲ್ಲಿ ಜೂನಿಯರ್ ಬಾಲಯ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2021ರಲ್ಲಿ ಯೆನ್ನಂಗ ಸರ್ ಉಂಗಾ ಸತ್ತ್ ಎಂಬುದು ಬಾಲಯ್ಯ ಅವರು ನಟಿಸಿರುವ ಕೊನೆಯ ಸಿನಿಮಾವಾಗಿದೆ.
ರಘು ಬಾಲಯ್ಯ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ. ರಘು ಬಾಲಯ್ಯ ಅವರ ನಿಧನಕ್ಕೆ ಅನೇಕ ಸಿನಿಮಾ ತಾರೆಯರು ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.