ತೆರಿಗೆ ಇಲಾಖೆ ವಿರುದ್ಧ ಅನುಷ್ಕಾ ಶರ್ಮಾ ಗರಂ – ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ

46
firstsuddi

ನಟಿ ಅನುಷ್ಕಾ ಶರ್ಮಾ ತೆರಿಗೆ ಇಲಾಖೆ ವಿರುದ್ದ ಗರಂ ಆಗಿದ್ದು, ಬಾಂಬೆ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ತಾವು ಮಾಡಿರುವ ಕಾರ್ಯಕ್ರಮಗಳ ಪ್ರಸಾರದ ಹಕ್ಕನ್ನು ತಾವು ಮಾರಾಟ ಮಾಡಿಲ್ಲ. ಅದರ ಹಕ್ಕುಗಳು ತಮ್ಮ ಬಳಿ ಇಲ್ಲ. ಸುಖಾಸುಮ್ಮನೆ ತಮಗೆ ನೋಟಿಸ್ ನೀಡಲಾಗಿದೆ. ಈ ನೋಟಿಸ್ ಅನ್ನು ಕೈ ಬಿಡಬೇಕು ಎಂದು ಕೋರ್ಟ್ ಗೆ ಅನುಷ್ಕಾ ಮನವಿ ಮಾಡಿದ್ದಾರೆ.

2012-13 ಹಾಗೂ 2013-14ನೇ ಸಾಲಿನ ತೆರಿಗೆ ಬಾಕಿ ಪಾವತಿಸುವಂತೆ ಅನುಷ್ಕಾ ಶರ್ಮಾ ಅವರಿಗೆ ಮಾರಾಟ ತೆರಿಗೆಯ ಆಯುಕ್ತರು ಸೂಚಿಸಿದ್ದರು. ಇದನ್ನು ಪ್ರಶ್ನೆ ಮಾಡಿ ನಟಿ ಕೋರ್ಟ್ ಮೊರೆ ಹೋಗಿದ್ದಾರೆ.

ಅನುಷ್ಕಾ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಪಾಲ್ಗೊಂಡಿದ್ದಾರೆ. ನಿರೂಪಣೆ ಮಾಡಿದ್ದಾರೆ. ದೇಶ ವಿದೇಶಗಳ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರೂ, ಮಾರಾಟ ತೆರಿಗೆಯನ್ನು ಪಾವತಿಸಿಲ್ಲ. ಹಾಗಾಗಿ ಕೂಡಲೇ ಪಾವತಿಸಬೇಕು ಎಂದು ಮಾರಾಟ ತೆರಿಗೆ ಆಯುಕ್ತರು ಸೂಚಿಸಿದ್ದರು.

ಈ ಕಾರ್ಯಕ್ರಮಗಳು ಹಾಗೂ ಸಮಾರಂಭಗಳು ಮಾರಾಟ ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಮತ್ತು ಆಯಾ ಕಾರ್ಯಕ್ರಮಗಳ ಪ್ರಸಾರದ ಹಕ್ಕನ್ನು ಅನುಷ್ಕಾ ಹೊಂದಿಲ್ಲವೆಂದು ಅನುಷ್ಕಾ ಶರ್ಮಾ ಅವರ ತೆರಿಗೆ ಸಲಹೆಗಾರ ಶ್ರೀಕಾಂತ್ ವೇಲೇಕರ್ ಅವರು ನಟಿಯ ಪರವಾಗಿ ಈ ಮೊದಲು ಅರ್ಜಿ ಸಲ್ಲಿಕೆ ಮಾಡಿದ್ದರು. ಆಗ ಕೋರ್ಟ್ ಅನುಷ್ಕಾ ಶರ್ಮಾ ಅವರೇ ಅರ್ಜಿ ಸಲ್ಲಿಕೆ ಮಾಡಲಿ ಎಂದು ಸೂಚಿಸಿತ್ತು. ಈ ಕಾರಣಕ್ಕೆ ಅನುಷ್ಕಾ ಶರ್ಮಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ಮಾರಾಟ ತೆರಿಗೆ ಇಲಾಖೆಗೆ ಉತ್ತರಿಸುವಂತೆ ಕೋರ್ಟ್ ಸೂಚನೆ ನೀಡಿದೆ.