ದುಷ್ಕರ್ಮಿಗಳಿಂದ ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ…

233
firstsuddi

ಬೆಂಗಳೂರು : ಬಿಎಂಟಿಸಿ ಬಸ್ ಮಹಿಳಾ ಕಂಡಕ್ಟರ್ ಮೇಲೆ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿರುವ ಘಟನೆ ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರಿನ ಶಿರಾ ಮೂಲದ ಇಂದಿರಾ ಬಾಯಿ(35) ಆ್ಯಸಿಡ್ ದಾಳಿಗೊಳಗಾದ ಕಂಡಕ್ಟರ್ ಎಂದು ಗುರುತಿಸಲಾಗಿದ್ದು, ಇಂದಿರಾ ಬಾಯಿ ಅವರು ಬೆಂಗಳೂರಿನ ಹಾವನೂರು ಬಡಾವಣೆಯಲ್ಲಿ ವಾಸವಾಗಿದ್ದು, ಪೀಣ್ಯದ 9ನೇ ಡಿಪೋದಲ್ಲಿ ಬಿಎಂಟಿಸಿ ಬಸ್ ಕಂಟಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಇಂದು ಬೆಳಿಗ್ಗೆ ಮನೆಯಿಂದ ಡಿಪೋಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಟಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇಂದಿರಾ ಬಾಯಿ ಅವರ ದೇಹದ ಬಲಭಾಗಕ್ಕೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಆ್ಯಸಿಡ್ ದಾಳಿಯಿಂದ ಇಂದಿರಾ ಅವರ ಮುಖ, ಕೈ ಹಾಗೂ ದೇಹದ ಇತರೆ ಭಾಗಗಳು ಸುಟ್ಟುಹೋಗಿದ್ದು, ಸದ್ಯ ಅವರು ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.