ಬೆಂಗಳೂರು : ಪತಿಯೇ ತನ್ನ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯ ಸರೈಪಾಳ್ಯದಲ್ಲಿ ನಡೆದಿದೆ.
ಶೇಖ್ ಸೊಹೈಲ್ ಎಂಬಾತ ತನ್ನ ಪತ್ನಿ ತಬ್ಸೆನ್ ಬೇಬಿ(32) ಎಂಬಾಕೆಯನ್ನು ಕೊಲೆಗೈದಿದ್ದಾನೆ. ಆರೋಪಿ ಶೇಕ್ ಸೊಹೈಲ್ ಮತ್ತು ತಬ್ಸೆನ್ ಬೇಬಿ ಇಬ್ಬರೂ ಕೂಡ ಕೋಲ್ಕತ್ತಾ ಮೂಲದವರು. 14 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ 2013ರಲ್ಲಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಬೆಂಗಳೂರಿನಲ್ಲಿದ್ದ ನದೀಮ್ ಜೊತೆ ತಬ್ಸೆನ್ ಗೆ ಪರಿಚಯ ಆಗಿದ್ದು, ಇಬ್ಬರೂ ಸಂಬಂಧವನ್ನು ಶುರು ಮಾಡಿದ್ದರು. ಈ ವಿಚಾರ ತಿಳಿದಿದ್ದ ಸೊಹೈಲ್ ಪತ್ನಿಯನ್ನು ಮತ್ತೆ ಕೋಲ್ಕತ್ತಾಗೆ ಕರೆದೊಯ್ದಿದ್ದ. ಆದರೆ ಗಂಡನ ಜೊತೆ ಇರಲಾರದೇ ಪ್ರಿಯಕರ ನದೀಮ್ ಮೇಲೆಯೇ ಮನಸ್ಸಿಟ್ಟಿದ್ದ ತಬ್ಸೆನ್ 6 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಪ್ರಿಯಕರನೊಂದಿಗೆ ವಾಸವಿದ್ದಳು. ಇಬ್ಬರಿಗೂ ಬಳಿಕ ಮಗುವಾಗಿದ್ದು, ಸರೈಪಾಳ್ಯದಲ್ಲಿ ಜೀವನ ನಡೆಸುತ್ತಿದ್ದರು.
ಮಗುವಿನ ವಿಚಾರ ಗೊತ್ತಾಗುತ್ತಿದ್ದಂತೆ ಬೆಂಗಳೂರಿಗೆ ಬಂದಿದ್ದ ಆರೋಪಿ ಸೊಹೈಲ್, ನಿನ್ನೆ ರಾತ್ರಿ ಪತ್ನಿ ವಾಸವಿದ್ದ ಮನೆಗೆ ಬಂದಿದ್ದ. ಸೊಹೈಲ್ ಮನೆಯ ಕೋಣೆಯೊಳಗೆ ತಬ್ಸೆನ್ ನನ್ನು ಕೂಡಿ ಹಾಕಿ, ಜಗಳ ಶುರು ಮಾಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಅಲ್ಲೇ ಇದ್ದ ಚಾಕುವಿನಿಂದ ಸೊಹೈಲ್ ತಬ್ಸೆನ್ ನ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಮಾತ್ರವಲ್ಲದೇ ಅಲ್ಲೇ ಇದ್ದ 2 ವರ್ಷದ ಮಗುವಿಗೂ ಚಾಕುವಿನಿಂದ ಇರಿದು ಗಾಯ ಮಾಡಿದ್ದಾನೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಬಂದಿದ್ದ ಹೆಣ್ಣೂರು ಪೊಲೀಸರು ಆರೋಪಿ ಸೊಹೈಲ್ ನನ್ನು ಬಂಧಿಸಿದ್ದಾರೆ. ಸದ್ಯ ಗಾಯಗೊಂಡಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.