ರಾಮನಗರ : 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಹೆಚ್ ಡಿ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿರುವ ಕಮಲ್ ಪಂತ್ ವಿರುದ್ಧ ಬಿಜೆಪಿ ನಾಯಕರು ಆರೋಪ ಮಾಡಿದ್ದರಿಂದ ಈ ಅಕ್ರಮ ಹೊರಗೆ ಸಿಡಿದಿದೆ. ಪಿಎಸ್ಐ ಅಕ್ರಮವನ್ನು ಸ್ವತಃ ಪೊಲೀಸರೇ ಹೊರಗೆ ಎಳೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದುವೇಳೆ ಬೆಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಬಿಜೆಪಿ ನಾಯಕರು ಮಾತನಾಡದೇ ಇದ್ದಿದ್ದರೇ ಈ ಆರೋಪ ಹೊರಗೆ ಬೀಳುತ್ತಲೇ ಇರಲಿಲ್ಲ. ಬಿಜೆಪಿ ನಾಯಕ ಮಾತುಗಳಿಂದ ಕೆರಳಿದ ಪೊಲೀಸ್ ಸಿಬ್ಬಂದಿ ಈ ಅಕ್ರಮವನ್ನು ಬಹಿರಂಗಪಡಿಸಿದ್ದಾರೆ. ಸಚಿವ ಅಶ್ವತ್ಥ ನಾರಾಯಣ ಅವರ ಕುರಿತು ಮಾಹಿತಿಯನ್ನು ಬಿಜೆಪಿಯವರೇ ಪೊಲೀಸ್ ಸಿಬ್ಬಂದಿಗೆ ನೀಡಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಚಾಮರಾಜಪೇಟೆ ಹತ್ತಿರ ಚಂದ್ರು ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ಕಮಿಷನರ್ ಕಮಲ್ ಪಂತ್ ವಿರುದ್ಧ ತಿರುಗಿಬಿದ್ದಿದ್ದರು. ಕಮಲ್ ಪಂತ್ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇರಲಿಲ್ಲ. ಪಂತ್ ವಿರುದ್ಧ ಆರೋಪ ಮಾಡಿರುವುದರಿಂದ ಈ ಹಗರಣ ಹೊರಬಂದಿದೆ. ಕಮಲ್ ಪಂತ್ ಬೆಂಬಲಿಗ ಅಧಿಕಾರಿಗಳೇ ಹೊರತಂದಿದ್ದಾರೆ. ಇಲ್ಲಿ ತನಿಖಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕರ್ನಾಟಕದ ಭವಿಷ್ಯದ ಒಳಿತಿಗಾಗಿ ಕೆಲಸ ಮಾಡಬೇಕು ಎಂದಿದ್ದಾರೆ.










