ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ 2ನೇ ಬಾರಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಪಿಎಸ್ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗೋಷ್ಠಿ ನಡೆಸಿ, ಆಡಿಯೋ ಕ್ಲಿಪ್ ವೊಂದನ್ನು ಬಿಡುಗಡೆ ಮಾಡಿದ್ದರು. ಅಲ್ಲದೇ ಈ ಬಗ್ಗೆ ತಮ್ಮ ಬಳಿ ಕೆಲವು ಸಾಕ್ಷ್ಯಗಳು ಇರುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಹಿನ್ನಲೆ ಎರಡು ದಿನಗಳ ಒಳಗೆ ಸಿಐಡಿ ಡಿವೈಎಸ್ ಪಿ ನರಸಿಂಹಮೂರ್ತಿ ಅವರ ಮುಂದೆ ಬೆಂಗಳೂರಿನ ಕಾರ್ಲಟನ್ ಭವನದ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಈ ಹಿಂದೆ ಕೂಡ ಪ್ರಿಯಾಂಕ್ ಖರ್ಗೆಯವರಿಗೆ ಸಿಐಡಿ ನೋಟಿಸ್ ಜಾರಿಗೊಳಿಸಿತ್ತು. ನೋಟಿಸ್ ಸ್ವೀಕರಿಸಿದ್ದರೂ ವಿಚಾರಣೆಗೆ ಹಾಜರಾಗಲು ಖರ್ಗೆ ನಿರಾಕರಿಸಿದ್ದರು. ಇದೀಗ ಮತ್ತೆ ಸಿಐಡಿ ನೋಟಿಸ್ ನೀಡಿದ್ದು, ಈ ಬಾರಿಯಾದರೂ ಪ್ರಿಯಾಂಕ ಖರ್ಗೆ ವಿಚಾರಣೆಗೆ ಹಾಜರಾಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ.










