ಕೊಟ್ಟಿಗೆಹಾರ: ವಲಸೆ ಬಂದ ಹೊರ ಜಿಲ್ಲೆ, ರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅವರ ಆಧಾರ್ ಕಾರ್ಡ್, ಸದಸ್ಯರ ಸಂಪೂರ್ಣ ಮಾಹಿತಿ ಕಲೆ ಹಾಕಿ ಬೆಳೆಗಾರರು ಅವರ ವಿವರವನ್ನು ಪೊಲೀಸ್ ಠಾಣೆಗೆ ನೀಡಿ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಡಿ.ವಿ.ರೇಣುಕಾ ಅವರು ಬಣಕಲ್ ಪೊಲೀಸ್ ಠಾಣೆಯಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ಮಾತನಾಡಿದರು. ಕಾರ್ಮಿಕರ ರಕ್ಷಣೆ ಬೆಳೆಗಾರರ ಹೊಣೆಯಾಗಿದೆ. ಈಗ ಹೆಚ್ಚು ಕಳವು ಪ್ರಕರಣಗಳು ದಾಖಲಾಗುತ್ತಿವೆ. ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆಯೂ ಇದೆ. ಹಾಗೆಯೇ ವಲಸೆ ಬರುವ ಅಸ್ಸಾಂ ಕಾರ್ಮಿಕರು ಹೆಚ್ಚಾಗುತ್ತಿದ್ದಾರೆ. ಹಾಗಾಗಿ ಕಾರ್ಮಿಕರು ಮಾಡುವ ಕಳವು ಪ್ರಕರಣಗಳಿಗೆ ವ್ಯಾಪಾರಿಗಳು ಕಳವು ಮಾಡಿದ ಕಾಫಿ, ಕಾಳುಮೆಣಸು ಅವರಿಂದ ಖರೀದಿ ಮಾಡಲು ಸಹಕಾರ ನೀಡಬಾರದು. ಬೆಳೆಗಾರರು ಕಾಫಿ, ಕಾಳು ಮೆಣಸು ಗೋದಾಮುಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ಬೆಳೆಗಾರರು, ವ್ಯಾಪಾರಿಗಳು ಹೆಚ್ಚು ಹಣವನ್ನು, ಚಿನ್ನಾಭರಣವನ್ನು ಮನೆ, ಅಂಗಡಿಗಳಲ್ಲಿ ಇಡದೆ ಬ್ಯಾಂಕ್ ಲಾಕರ್‌ಗಳಲ್ಲಿ ಇಡಬೇಕು. ತೋಟಗಳಿಗೆ ಹೊರಗಿನಿಂದ ಕಾರ್ಮಿಕರನ್ನು ಕೆಲಸಕ್ಕೆ ಕರೆ ತರುವ ವಾಹನಗಳಿಗೆ ವಿಮೆ ಮತ್ತಿತರ ದಾಖಲೆಯಿದೆಯೇ ಎಂದು ಪರಿಶೀಲಿಸಬೇಕು. ಠಾಣೆಗಳಿಗೆ ಕಾರ್ಮಿಕರ ಬಗ್ಗೆ ಮಾಹಿತಿ ನೀಡದಿದ್ದರೆ ಯಾವುದೇ ಅನಾಹುತಗಳಿಗೆ ತೋಟದ ಮಾಲೀಕರನ್ನೇ ಹೊಣೆ ಮಾಡಲಾಗುವುದು.ಎಲ್ಲ ಅಪರಾಧ ತಡೆಗಟ್ಟಲು ಬೆಳೆಗಾರರು ಪೊಲೀಸರ ಜೊತೆ ಸಹಕಾರ ನೀಡಬೇಕು. ಕಾಫಿ ತೋಟಗಳಲ್ಲಿ ಪೈಬರ್ ಏಣಿಗಳನ್ನು ಬಳಸಿ ಕಾರ್ಮಿಕರ ಸಾವು ತಪ್ಪಿಸಬೇಕು. ಚಾಲಕರು ವಾಹನ ಚಲಾಯಿಸುವಾಗ ತಮ್ಮಲ್ಲಿ ಸೂಕ್ತ ದಾಖಲೆ ಇರಬೇಕು ಎಂದರು. ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಸಂಜಯ್ ಗೌಡ, ಬಿ.ಎಂ.ಆದರ್ಶ್, ಬಿ.ಎಸ್.ವಿಕ್ರಂ ಮಾತನಾಡಿದರು. ಬೆಳೆಗಾರರಾದ ಬಿ.ಬಿ.ರಮೇಶ್, ಟಿ.ಎಂ.ಗಜೇಂದ್ರ, ಸಂಜಯ್ ಗೌಡ, ಬಿ.ಸಿ.ಪ್ರವೀಣ್, ಬಿ.ಎಲ್.ದಿನೇಶ್, ಬಾಳೂರು ಮೋಹನ್, ಹೆಗ್ಗುಡ್ಲು ಪ್ರಸನ್ನ, ಯತೀಶ್, ಸಮಾಜ ಸೇವಕ ಮೊಹಮ್ಮದ್ ಆರೀಫ್ ಮತ್ತಿತರರು ಇದ್ದರು.