ಬಸವಣ್ಣನವರು ಸಾಮಾಜಿಕ ಪರಿವರ್ತನೆಗಾಗಿ ಕ್ರಾಂತಿ ಮಾಡಿದವರು : ಕೆ.ಬಿ ಸುಧಾ

62
firstsuddi

ಚಿಕ್ಕಮಗಳೂರು: ಮಹಾ ಮಾನವತಾವಾದಿ ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯನ್ನು ನಗರದ ಬಿಎಸ್‍ಪಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇಂದು ಸಂಭ್ರಮದಿಂದ ಆಚರಿಸಿದರು.

ಜನ್ಮದಿನದ ಪ್ರಯುಕ್ತ ಬಸವಣ್ಣನವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಅಸ್ಪೃಶ್ಯತೆ, ಅಸಮಾನತೆ, ಮೂಢನಂಬಿಕೆ ಮತ್ತು ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಿ ಸಾಮಾಜಿಕ ಪರಿವರ್ತನೆಗಾಗಿ ಕ್ರಾಂತಿ ಮಾಡಿದವರು ಭಕ್ತಿ ಭಂಡಾರಿ ಬಸವಣ್ಣನವರು ಎಂದರು.

ಬಸವಣ್ಣನವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡಲ್ಲಿ ಅವರ ಸಂದೇಶಗಳನ್ನು ಪಾಲಿಸಿದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಾಜಕೀಯ ಪಕ್ಷಗಳು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಪೂಜಿಸಿ ಜಯಂತಿ ಆಚರಿಸಿದರಷ್ಟೇ ಸಾಲದು ಅವರ ತತ್ವ, ಸಿದ್ಧಾಂತಗಳನ್ನು, ಆದರ್ಶಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಲಹೆ ಮಾಡಿದರು.

ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುತ್ತಿವೆ. ಆದರೆ ಅವರ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿವೆ ಎಂದು ವಿಷಾದಿಸಿದರು.

ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ಅಸೆಂಬ್ಲಿ ಸಂಯೋಜಕಿ ಕೆ.ಎಸ್. ಮಂಜುಳಾ, ಪದಾಧಿಕಾರಿಗಳಾದ ಜಯಚಂದ್ರ, ವಸಂತ, ನವೀನ್, ವಿಜಯಕುಮಾರ್, ನಯನ, ರತ್ನಮ್ಮ ಉಪಸ್ಥಿತರಿದ್ದರು.