ಬಿಜೆಪಿ ಎ ಟೀಮ್ ಅಂತ ಎಲ್ಲರೂ ಒಪ್ಪಿಕೊಂಡಾಗಿದೆ, ಬಿ ಟೀಮ್ ಯಾರಾದರೆ ನಮಗೇನು : ಸಿಎಂ.

63
firstsuddi

ಬೆಳಗಾವಿ : ವಾಯವ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣೆ ಅಖಾಡಕ್ಕಿಳಿದಿದ್ದಾರೆ. ಇಂದು ಬೆಳಗಾವಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದಂತೆ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಭೇಟಿ ಮಾಡಿದರು. ಈ ವೇಳೆ ಮುಖ್ಯಮಂತ್ರಿಗಳಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಾಥ್ ನೀಡಿದರು.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ನಿನ್ನೆ ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನ ಪಡೆದಿದ್ದೇವೆ. ಪ್ರಥಮ ಬಾರಿಗೆ ಬಿಜೆಪಿ ಮೂರು ಸ್ಥಾನ ಪಡೆದಿದೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪ್ರತಿನಿಧಿತ್ವ ಹೆಚ್ಚಾಗಿದೆ. ಅದೇ ರೀತಿ ವಿಧಾನ ಪರಿಷತ್ನ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.

ವಾಯುವ್ಯ ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಯಡಿಯೂರಪ್ಪ ಸೇರಿ ನಮ್ಮ ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ. ಎಲ್ಲಾ ಸಂಘ ಸಂಸ್ಥೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅರುಣ್ ಶಹಾಪುರ್, ಹನುಮಂತ ನಿರಾಣಿ ದೊಡ್ಡ ಲೀಡ್ ನಲ್ಲಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ವಿರುದ್ಧ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಮುಂಚೆಯೇ ಹೇಳಿದ್ದರು. ಪೂರ್ವಭಾವಿಯಾಗಿ ಡಾಕ್ಟರೇಟ್ ಕೊಡುವ ಕಾರ್ಯಕ್ರಮ ಇತ್ತು. ಆರು ತಿಂಗಳು ಮೊದಲೇ ನಿಶ್ಚಯವಾಗಿತ್ತು. ನನಗೆ ಹೇಳಿಯೇ ಹೋಗಿದ್ದರು. ಎಲ್ಲೆಲ್ಲಿ ಸಲಹೆ ನೀಡಬೇಕೋ ಅಲ್ಲಿ ಕೊಟ್ಟಿದ್ದು, ಪ್ರಭಾಕರ್ ಕೋರೆ ನಮ್ಮ ಜೊತೆಗಿದ್ದಾರೆ. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ದೊಡ್ಡಮಟ್ಟದ ಸಭೆ ಮಾಡುತ್ತೇವೆ. ಪ್ರಭಾಕರ್ ಕೋರೆ ನಮ್ಮ ಹಿರಿಯರು ಮಾರ್ಗದರ್ಶಕರು. ಸದಾ ಕಾಲ ನಮ್ಮ ಮಾರ್ಗದರ್ಶಕರಾಗಿ ಇರುತ್ತಾರೆ. ಪಕ್ಷವು ಗುರುತಿಸುತ್ತದೆ ಮತ್ತು ನಾವು ಅವರನ್ನು ಗುರುತಿಸುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಜೆಡಿಎಸ್ ಬಿ ಟೀಂ ಅಂತಾರೆ, ಜೆಡಿಎಸ್ ಕಾಂಗ್ರೆಸ್ ಪಕ್ಷ ಬಿ ಟೀಂ ಅಂತಾರೆ. ಈ ಎರಡರ ಅರ್ಥ ಏನೆಂದರೆ ಎ ಟೀಂ ಅಂತೂ ನಾವಾಗಿದ್ದೇವೆ. ಬಿಜೆಪಿ ಎ ಟೀಂ ಅಂತಾ ಎಲ್ಲರೂ ಒಪ್ಪಿಕೊಂಡಾಗಿದೆ. ಇನ್ನೂ ಬಿ ಟೀಂ ಯಾರಾದರೆ ನಮಗೇನೂ? ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.