ಬೆಂಗಳೂರು : ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ನೀಡಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನಮ್ಮಜನ ಶಾಂತಿಪ್ರಿಯರು, ನ್ಯಾಯಾಲಯದ ಬಗ್ಗೆ ಗೌರವ, ಕಾನೂನಿನ ಬಗ್ಗೆ ನಿಷ್ಠೆ ಉಳ್ಳವರು. ಒಡೆಯುವವರು, ಬೆಂಕಿಹಚ್ಚುವವರು ನಿಮ್ಮ ಪಕ್ಷದಲ್ಲಿ ಹೆಚ್ಚಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರೇ, ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೆ ನಿಷೇಧಾಜ್ಞೆ ಹೇರಿ ನೀವು ಕನ್ನಡಿಗರನ್ನು ಅವಮಾನಿಸಿದ್ದೀರಿ.”
“ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸದ ನಿಮ್ಮ ಪಕ್ಷಕ್ಕೆ ದೇಶದಲ್ಲಿ ನಡೆದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದಿರಲಾರದು. ಗಾಂಧಿ,ನೆಹರೂ ಮತ್ತು ಪಟೇಲ್ ಸೇರಿದಂತೆ ಎಲ್ಲರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು. ಹೋರಾಟದ ಪರಂಪರೆಗೆ ತಡೆಯೊಡ್ಡಬೇಡಿ. ಪ್ರತಿಭಟನೆ, ಪ್ರತಿರೋಧ, ಚಳುವಳಿಗಳೆಲ್ಲ ಆರೋಗ್ಯಪೂರ್ಣ ಪ್ರಜಾಪ್ರಭುತ್ವದ ಲಕ್ಷಣಗಳು.”
“ಭಿನ್ನಮತದ ಅಭಿವ್ಯಕ್ತಿಯ ಕೊರಳು ಹಿಚುಕಲು ಹೊರಡುವುದು ಸರ್ವಾಧಿಕಾರಿ ಧೋರಣೆ. ಇದು ಹಿಟ್ಲರನ ಜರ್ಮನಿ ಅಲ್ಲ, ಗಾಂಧೀಜಿವಯರ ಭಾರತ. ಬಿ.ಎಸ್. ಯಡಿಯೂರಪ್ಪ ಅವರೇ, ನೀವು ಪಕ್ಷದ ಗುಲಾಮರಾಗಬೇಡಿ, ಆತ್ಮಸಾಕ್ಷಿಗೆ ಕಿವಿಕೊಡಿ.”
“ನಿಮ್ಮ ಪೌರತ್ವ ತಿದ್ದುಪಡಿ ಕಾಯ್ದೆಯ ಜನಹಿತದ ಬಗ್ಗೆ ಅಷ್ಟೊಂದು ಭರವಸೆ ಇದ್ದಿದ್ದರೆ ಪ್ರತಿಭಟನೆಗೆ ಯಾಕೆ ಹೆದರುತ್ತಿದ್ದೀರಿ, ನರೇಂದ್ರ ಮೋದಿ ಅವರೇ? ಜನಾಭಿಪ್ರಾಯ ಆಲಿಸಿ, ಅವರಿಗೆ ಮನವರಿಕೆ ಮಾಡಿಕೊಡಿ. ದಂಡಪ್ರಯೋಗ ಮನುಷ್ಯನ ದೌರ್ಬಲ್ಯ. ನಿಮ್ಮ ವರ್ತನೆಯೇ ನಿಮ್ಮ ದುಷ್ಟ ಆಲೋಚನೆಗೆ ಸಾಕ್ಷಿ.”
“ಕಾರ್ಯಾಂಗದ ಮುಖ್ಯ ಭಾಗವಾಗಿರುವ ಪೊಲೀಸರೇ, ನೀವು ಸರ್ಕಾರಿ ನೌಕರರಾಗಿದ್ದರೂ ಮೊದಲು ಮನುಷ್ಯರು. ಕರ್ನಾಟಕದ ಪೊಲೀಸರಿಗೆ ಅವರದ್ದೇ ಆಗಿರುವ ಹಿರಿಮೆ-ಗರಿಮೆಗಳಿವೆ. ನಿಮಗೆ ದೆಹಲಿ ಪೊಲೀಸರು ಆದರ್ಶವಾಗುವುದು ಬೇಡ, ಅವರ ಸ್ಪೂರ್ತಿಯಿಂದ ಕೆಲಸ ಮಾಡಿದರೆ ಕರ್ನಾಟಕದ ಜನತೆ ನಿಮ್ಮನ್ನು ಕ್ಷಮಿಸಲಾರರು.”










