ಮಂಡ್ಯ : ಮದುವೆಯಾದರೆ ಇಬ್ಬರು ಬೇರೆಯಾಗುತ್ತೇವೆ ಎಂಬ ಆತಂಕದಿಂದ ಅವಳಿ ಸೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ದೀಪಿಕಾ(19) ಮತ್ತು ದಿವ್ಯಾ (19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಚಿಕ್ಕ ವಯಸ್ಸಿನಿಂದ ಈ ಸೋದರಿಯರು ಅನ್ಯೋನ್ಯವಾಗಿದ್ದು ಒಬ್ಬರಿಗೊಬ್ಬರು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇಬ್ಬರು ದೊಡ್ಡವರಾಗಿದ್ದಾರೆ. ಆದ್ದರಿಂದ ಮದುವೆ ಮಾಡೋಣ ಎಂದು ದೀಪಿಕಾ ಮತ್ತು ದಿವ್ಯಾ ಅವರ ತಂದೆ ಸುರೇಶ್ ಮತ್ತು ತಾಯಿ ಯಶೋಧ ನಿರ್ಧಾರ ಮಾಡಿದ್ದರು. ಅದರಂತೆ ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಬೇರೆ ಬೇರೆ ಮದುವೆಯಾದರೆ ನಾವು ಒಟ್ಟಿಗೆ ಇರಲು ಆಗುವುದಿಲ್ಲ, ಮದುವೆಯಿಂದ ನಾವು ದೂರವಾಗುತ್ತೇವೆ ಎಂದು ಯೋಚಿಸಿದ ಈ ಇಬ್ಬರು ಸಹೋದರಿಯರು ನಿನ್ನೆ ಸಂಜೆ ವೇಳೆಗೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










