ಧಾರವಾಡ: ಮಲಗುವಾಗ ಅಳುತ್ತೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಒಂದು ವರ್ಷದ ಮಗುವನ್ನು ಗೋಡೆಗೆ ಎಸೆದು ಕೊಲೆ ಮಾಡಿರುವ ಅಮಾನುಷ ಕೃತ್ಯ ಜಿಲ್ಲೆಯಲ್ಲಿ ನಡೆದಿದೆ.
ಶ್ರೇಯಾ (1 ವರ್ಷ) ಮೃತ ದುರ್ದೈವಿ ಮಗು. ಈಕೆಯನ್ನು ತಂದೆ ಶಂಭುಲಿಂಗಯ್ಯ ಕೊಲೆ ಮಾಡಿದ್ದಾನೆ. ಈತ ತಾಲೂಕಿನ ಯಾದವಾಡ ಗ್ರಾಮದ ನಿವಾಸಿ.
ಪ್ರಕರಣದ ಹಿನ್ನಲೆ:- ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಂಭುಲಿಂಗಯ್ಯ ಶಾಪೂರಮಠ ಎಂಬ ಪಾಪಿ ತಂದೆ ಮಗುವಿನ ಮೇಲೆ ಕೋಪ ತೋರಿಸಿಕೊಂಡಿದ್ದಾನೆ. ಕುಡಿತದ ನಶೆಯಲ್ಲಿದ್ದಾಗ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮಲಗುವಾಗ ಮಗು ಅಳುತ್ತೆ ಎಂಬ ಕಾರಣಕ್ಕೆ ಮಗುವನ್ನ ಎತ್ತಿ ಗೋಡೆಗೆ ಎಸೆದಿದ್ದಾನೆ. ಪರಿಣಾಮ ಮಗು ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಕೂಡಲೇ ಆಕೆಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇದೀಗ ಪುಟ್ಟ ಕಂದಮ್ಮ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
ಘಟನೆ ಸಂಬಂಧ ಕುಟುಂಬಸ್ಥರು ಪಾಪಿ ತಂದೆ ಶಂಭುಲಿಂಗಯ್ಯನ ವಿರುದ್ಧ ದೂರು ನೀಡಿದ್ದು, ಗರಗ ಠಾಣೆ ಪೊಲೀಸರು ಶಂಭುಲಿಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ.










