ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ…

76
firstsuddi

ಮೈಸೂರು : ಚಿತ್ರದುರ್ಗದ ಮುರುಘಾರಾಜೇಂದ್ರ ಬ್ರಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.

ಇಬ್ಬರು ಅಪ್ರಾಪ್ತೆಯರ ಮೇಲೆ ಕಳೆದ ಮೂರೂವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶ್ರೀಗಳು ಸೇರಿದಂತೆ, ಐದು ಮಂದಿ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ದೂರಿನನ್ವಯ ಎಫ್ ಐಆರ್ ದಾಖಲಿಸಲಾಗಿದೆ. ಕೋರ್ಟ್ ನ ಮಾರ್ಗದರ್ಶನದಂತೆ ಇದೀಗ ಎಫ್ ಐಆರ್ ಪ್ರತಿಯನ್ನು ಚಿತ್ರದುರ್ಗದ ಎಸ್ಪಿಗೆ ಕಳುಹಿಸಲಾಗಿದೆ.

ಶರಣರು ಮೊದಲ ಆರೋಪಿಯಾಗಿದ್ದು, ಚಿತ್ರದುರ್ಗದಲ್ಲಿ ಮಠ ನಡೆಸುತ್ತಿರುವ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ ಎರಡನೇ ಆರೋಪಿಯಾಗಿದ್ದಾರೆ. ಮಠದ ಬಸವಾದಿತ್ಯ ಮೂರನೇ ಆರೋಪಿಯಾಗಿದ್ದು, ಮಠದ ಭಕ್ತರೆನ್ನಲಾದ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ನಾಲ್ಕು ಮತ್ತು ಐದನೇ ಆರೋಪಿಗಳಾಗಿದ್ದಾರೆ.

ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ಮಾಡುತ್ತಿರುವುದಾಗಿ, ಅದಕ್ಕೆ ಉಳಿದ ಆರೋಪಿಗಳು ಸಹಕರಿಸಿರುವುದಾಗಿ ವಿದ್ಯಾರ್ಥಿನಿಯರು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಣ್ಣು ಮತ್ತು ಸಿಹಿಯ ಆಶೀರ್ವಾದ ನೀಡುವ ನೆಪದಲ್ಲಿ ಸ್ವಾಮೀಜಿಗಳು ವಿದ್ಯಾರ್ಥಿನಿಯರನ್ನು ಏಕಾಂತಕ್ಕೆ ಕರೆಸಿಕೊಳ್ಳುತ್ತಾರೆ. ಈ ವೇಳೆ ಬಾಲಕಿಯರ ಜೊತೆ ಮಾತನಾಡುತ್ತಾ ಕುಟುಂಬದ ಹಿನ್ನೆಲೆ ತಿಳಿದುಕೊಳ್ಳುತ್ತಾರೆ. ನಂತರ ಸಹಾಯದ ಭರವಸೆ ನೀಡುವ ಸ್ವಾಮೀಜಿಗಳು ವಿದ್ಯಾರ್ಥಿನಿಯರನ್ನು ಲೈಂಗಿಕ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಾರೆ. ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಹಣ್ಣು ಮತ್ತು ಸಿಹಿಯಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಅತ್ಯಾಚಾರ ನಡೆಸುತ್ತಾರೆ ಎಂದು ದೂರಲಾಗಿದೆ.

ದೌರ್ಜನ್ಯದ ಕುರಿತು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸ್ವಾಮೀಜಿ ಬಳಿಗೆ ಹೋಗಲು ನಿರಾಕರಿಸಿದರೆ ಹಾಸ್ಟೆಲ್ ವಾರ್ಡನ್ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಾರೆ. ಕಿರುಕುಳ ಪ್ರಶ್ನಿಸಿದ ಕಾರಣ ಹಾಸ್ಟೆಲ್ ನಿಂದ ಹೊರ ಹಾಕಲಾಗುತ್ತಿತ್ತು ಎಂದು ನೊಂದ ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.