ಮೂಡಿಗೆರೆ : ಮೂಡಿಗೆರೆ ತಾಲ್ಲೂಕಿನಾದ್ಯಂತ ಈ ಬಾರಿಯ ಮಳೆಯಿಂದಾಗಿ ಜಮೀನುಗಳಲ್ಲಿ ಶೇಖರಣೆಗೊಂಡಿರುವ ಮರಳನ್ನು ತೆಗೆಯಲು ಅನುಮತಿ ನೀಡುವಂತೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ರಘು ಅವರ ಪತ್ರಕ್ಕೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಸ್ಪಂದಿಸಿ ಸಮಸ್ಯೆ ಪರಿಹರಿಸಿಕೊಟ್ಟಿದ್ದಾರೆ.
ಈ ಬಾರಿ ಮಲೆನಾಡಿನಲ್ಲಿ ಬಿದ್ದ ರಣ ಭೀಕರ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಜಮೀನುಗಳಲ್ಲಿ ನೀರು ಹರಿದು ಮರಳು ಶೇಖರಣೆಗೊಂಡಿದ್ದು ವ್ಯವಸಾಯ ನಡೆಸಲು ಕಷ್ಟಕರವಾಗಿದೆ. ಹಲವೆಡೆಗಳಲ್ಲಿ ಗುಡ್ಡ ಕುಸಿತ, ಕೆರೆ ಕಟ್ಟೆ ಒಡೆದು ತೋಟ ಮತ್ತು ಗದ್ದೆಗಳಿಗೆ ನೀರು ಹರಿದಿದ್ದು, ನೀರಿನ ರಭಸಕ್ಕೆ ಜಮೀನುಗಳಲ್ಲಿ ಮರಳು ಶೇಖರಣೆಯಾಗಿದೆ. ಈ ರೀತಿಯಾಗಿ ಮರಳು ಶೇಖರಣೆಯಿಂದಾಗಿ ಜಮೀನುಗಳಲ್ಲಿ ಕೃಷಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದ್ದು, ಮರಳು ತೆರವುಗೊಳಿಸಲು ಕಾನೂನಿನ ನೀತಿಗಳು ಅಡ್ಡಿಯಾಗುತ್ತಿದೆ. ಕಾನೂನಿನ ಪ್ರಕಾರ ಮರಲು ತೆಗೆಯಲು ಮತ್ತು ಸಾಗಿಸಲು ಅನುಮತಿ ಕಡ್ಡಾಯವಾಗಿದ್ದು ತಾಲ್ಲೂಕಿನ ರೈತರು ಮರಳು ತೆಗೆಯಲು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಮರಳು ತೆಗೆಯಲೂ ಆಗದೆ, ಜಮೀನಿನಲ್ಲಿ ಕೆಲಸ ಮಾಡಿಸಲು ಆಗದೆ ಪರದಾಡುತ್ತಿದ್ದ ರೈತರ ಕಷ್ವವನ್ನು ಆಲಿಸಿದ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್. ರಘು ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಮೂಡಿಗೆರೆ ತಹಶೀಲ್ದಾರರಿಗೆ ಪತ್ರ ಬರೆದಿದ್ದು ಜಮೀನುಗಳಲ್ಲಿ ಶೇಖರಣೆಯಾಗಿರುವ ಮರಳು ತೆರವುಗೊಳಿಸಲು ಅನುಮತಿ ಕೋರಿ ಪತ್ರ ಬರೆದಿದ್ದರು.
ಈ ವಿಚಾರವಾಗಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದಾಗ, ಸಮಸ್ಯೆಗೆ ಸ್ಪಂಧಿಸಿದ ಶಾಸಕರು ಕೂಡಲೇ ಅಧಿಕಾರಿಗಳ ಸಭೆ ಕರೆದು ಮೂಡಿಗೆರೆ ತಹಶೀಲ್ದಾರ್, ವೃತ್ತ ನಿರೀಕ್ಷಕರು ಹಾಗೂ ಭೂ ಮತ್ತು ಗಣಿ ವಿಜಾÐನ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು. ಜಿಲ್ಲಾಧಿಕಾರಿಗಳು ಸಹ ಇದರ ಬಗ್ಗೆ ಸಹಮತ ವ್ಯಕ್ತಪಡಿಸಿದ್ದು ಸಮಸ್ಯೆ ಪರಿಹರಿಸುವಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದ್ದರು. ನಂತರ ತಹಶೀಲ್ದಾರ್ ಅವರು ಸಭೆಯಲ್ಲಿ ಜಮೀನುಗಳಲ್ಲಿ ಶೇಖರಣೆಗೊಂಡಿರುವ ಮರಳನ್ನು ತೆಗೆದು ಸಾಗಿಸಲು ಷರತ್ತುಬದ್ಧ ಒಪ್ಪಿಗೆ ನೀಡಿದರು.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ರಘು : ಮರಳು ಶೇಖರಣೆ ಆಗಿರುವ ಕುರಿತು ಶಾಸಕರು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಮೂಡಿಗೆರೆ ವೃತ್ತ ನಿರೀಕ್ಷಕರು ಹಾಗೂ ಭೂ ಮತ್ತು ಗಣಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಮನವಿಕೆ ಸ್ಪಂದಿಸಿದ ಶಾಸಕರು ಕೂಡಲೇ ಉನ್ನತ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಳಿಕ ರೈತರು ತಮ್ಮ ಜಮೀನುಗಳಲ್ಲಿ ಶೇಖರಣೆಯಾಗಿರುವ ಮರಳನ್ನು ಮಾರಾಟ ಮಾಡದೆ ತಮ್ಮ ಸ್ವಂತ ಬಳಕೆಗೆ ಮಾತ್ರ ಬಳಸಿಕೊಳ್ಳಬೇಕು. ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮಾತ್ರ ಮರಳು ಸಾಗಣೆ ಮಾಡಿಕೊಳ್ಳಬೇಕು ಎಂದು ಷರತ್ತು ಬದ್ಧ ಒಪ್ಪಿಗೆ ನೀಡಿರುತ್ತಾರೆ. ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ತಾ.ಪಂ.ಅಧ್ಯಕ್ಷ ಕೆ.ಸಿ.ರತನ್, ಪ.ಪಂ.ಸದಸ್ಯ ಪಟ್ಟದೂರು ಪುಟ್ಟಣ್ಣ, ಮುಖಂಡರಾದ ಪಂಚಾಕ್ಷರಿ, ದುಂಡುಗ ಪ್ರಮೋದ್, ಅರೇಕೂಡಿಗೆ ಶಿವು ಹಾಗೂ ವಿವಿಧ ಭಾಗಗಳಿಂದ ರೈತರು ಭಾಗವಹಿಸಿದ್ದರು.










