ಬೆಂಗಳೂರು: ಚಿತ್ರುದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳ ತೀರ್ಪನ್ನು ಹೈಕೋರ್ಟ್ ಇಂದು ಪ್ರಕಟಿಸಲಿದೆ. ಪ್ರಕರಣದ ಎಲ್ಲ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ, ಇಂದು ತೀರ್ಪು ಪ್ರಕಟ ಮಾಡಲಿದೆ. ದರ್ಶನ್ ಹಾಗೂ ಇತರ ಅರ್ಜಿದಾರರಿಗೆ ಜಾಮೀನು ನಿರಾಕರಿಸಿ ಕಳೆದ ಅಕ್ಟೋಬರ್ 14 ರಂದು ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ, ಮ್ಯಾನೇಜರ್ ನಾಗರಾಜ್ ಆರ್.ನಾಗರಾಜು, ದರ್ಶನ್ ಕಾರು ಚಾಲಕ ಎಂ.ಲಕ್ಷ್ಮಣ್, ಆಪ್ತರಾದ ಅನುಕುಮಾರ್, ಜಗದೀಶ್ ಮತ್ತು ಪ್ರದೋಷ್ ರಾವ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಮಧ್ಯೆ ಬೆನ್ನುಹುರಿ ಸಮಸ್ಯೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ದರ್ಶನ್‍ಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಹೈಕೊರ್ಟ್ ಅಕ್ಟೋಬರ್ 30ರಂದು ಆದೇಶಿಸಿತ್ತು. ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದು, ಡಿಸೆಂಬರ್ 11ರಂದು ದರ್ಶನ್‍ಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂಬುದಾಗಿ ಅವರ ಪರ ವಕೀಲರು ಡಿ.9ರಂದು ಕೋರ್ಟ್‍ಗೆ ತಿಳಿಸಿದ್ದರು. ಅಂದೇ ಜಾಮೀನುಗಳ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸುವವರೆಗೆ ಮಧ್ಯಂತರ ಜಾಮೀನನ್ನು ನ್ಯಾಯಾಲಯವು ವಿಸ್ತರಿಸಿತ್ತು. ಇಂದು ಜಾಮೀನು ಅರ್ಜಿಗಳ ತೀರ್ಪು ಪ್ರಕಟವಾಗಲಿದೆ.