ಬೆಂಗಳೂರು : ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದಿನಿಂದ 11 ದಿನಗಳ ಕಾಲ ಬೆಂಗಳೂರಿನ ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇಂದು ಬೆಳಗ್ಗೆ ಲಾಲ್‍ಬಾಗ್‍ನಲ್ಲಿ 213ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಈ ಬಾರಿಯ ಫ್ಲವರ್ ಶೋ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿವರ್ಷ ಲಕ್ಷಗಟ್ಟಲೆ ಜನರು ಈ ಫ್ಲವರ್ ಶೋಗೆ ಬರ್ತಾರೆ. ಈ ಬಾರಿ 10 ರಿಂದ 15 ಲಕ್ಷ ಜನರು ಬರುವ ನಿರೀಕ್ಷೆಯಿದೆ ಎಂದರು.
ತೋಟಾಗಾರಿಕೆಯ ಫಲಪುಷ್ಪ ಪ್ರದರ್ಶನದಲ್ಲಿ ನಮ್ಮ ರಾಜ್ಯ ಸಂಪತ್ತು ಎಷ್ಟು ಇದೆ, ಎಷ್ಟು ವಿಶೇಷ ಹಾಗೂ ವಿಶಾಲವಾಗಿದೆ ಎಂಬುವುದನ್ನ ತಿಳಿಸುತ್ತದೆ. ನಗರದಲ್ಲಿ ತೋಟಗಾರಿಕೆಯ ಹಸೀರಿಕರಣವನ್ನ ಹೆಚ್ಚಿಸಲು ಅನುದಾನ ಮೀಸಲಿಡುತ್ತಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ 100 ಕೋಟಿ ರೂಪಾಯಿಗಳನ್ನು ಹಸಿರೀಕರಣ ಹೆಚ್ಚಿಸಲು ಮೀಸಲಿಟ್ಟಿದ್ದೇವೆ. ಗುಡ್ಡಗಾಡು ಪ್ರದೇಶದಲ್ಲಿ ಹಸೀಕರಣ ಮಾಡುತ್ತೇವೆ ಎಂದರು.
ಫಲಪುಷ್ಪ ಪ್ರದರ್ಶನದ ವಿಶೇಷವೇನು?: ಪ್ರತಿವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಒಂದು ವಿಷಯವನ್ನಿಟ್ಟುಕೊಂಡು ಅಲಂಕಾರ, ಫಲಪುಷ್ಪ ಪ್ರದರ್ಶನ ಮಾಡಲಾಗುತ್ತದೆ. ಈ ಬಾರಿ ಪುಷ್ಪಗಳ ಮೂಲಕ ಬೆಂಗಳೂರಿನ ಇತಿಹಾಸದ ಸಾರಲಿದ್ದಾರೆ. ಬೆಂಗಳೂರಿನ 1,500 ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ, ಬೆಂಗಳೂರಿನ ಸ್ವಾತಂತ್ರ್ಯ ಪೂರ್ವ & ನಂತರದ ಇತಿಹಾಸದ ಮಾಹಿತಿಯನ್ನು ದೇಶದ ವಿವಿಧ ಬಗೆಯ ಪುಷ್ಪಗಳ ಮೂಲಕ ಪ್ರದರ್ಶಿಸಲಾಗುತ್ತದೆ.
ಪ್ರವೇಶ ಶುಲ್ಕ: ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 70 ರೂಪಾಯಿ, ರಜಾ ದಿನಗಳಲ್ಲಿ 75 ರೂಪಾಯಿ ನಿಗದಿ ಮಾಡಲಾಗಿದೆ. 12 ವರ್ಷ ಒಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂಪಾಯಿ ನಿಗದಿ ಮಾಡಲಾಗಿದೆ.










