ಮಂಡ್ಯ : ಜ್ಞಾನವಾಪಿ ಮಸೀದಿಯ ವಿವಾದ ಬಳಿಕ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಇಂದು ವಿಶ್ವ ಹಿಂದೂ ಪರಿಷತ್ `ಶ್ರೀರಂಗಪಟ್ಟಣ ಚಲೋ’ ಹಮ್ಮಿಕೊಂಡಿವೆ.
ಜಾಮಿಯಾ ಮಸೀದಿ ಈ ಹಿಂದೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು. ಟಿಪ್ಪು ಸುಲ್ತಾನ್ ದೇವಸ್ಥಾನದ ಮೇಲೆ ಈ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಗರ್ಭಗುಡಿ ಇದೆ. ಈ ನಿಟ್ಟಿನಲ್ಲಿ ನಮಗೆ ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಜಿಲ್ಲಾಧಿಕಾರಿಗೆ ವಿಹೆಚ್ಪಿ ಮನವಿ ಸಲ್ಲಿಸಿತ್ತು. ಜಿಲ್ಲಾಧಿಕಾರಿಗಳು ಈ ಮನವಿಗೆ ಪೂರಕವಾಗಿ ಸ್ಪಂದಿಸದ ಕಾರಣ ವಿಎಚ್ ಪಿ ಹಾಗೂ ಬಜರಂಗ ದಳದ ಪದಾಧಿಕಾರಿಗಳು ಇಂದು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿದ್ದಾರೆ.
ಹನುಮ ಭಕ್ತರು ಮಸೀದಿಯ ಒಳಗಡೆ ಪ್ರವೇಶ ಮಾಡಿ ಆಂಜನೇಯಸ್ವಾಮಿ ಪೂಜೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟದಲ್ಲಿ ಮಂಡ್ಯ, ಮೈಸೂರು ಭಾಗದಿಂದ ಸಾವಿರಾರು ಹನುಮ ಭಕ್ತರು ಮಾಲೆ ಧರಿಸಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆಂದು ಜಿಲ್ಲಾಡಳಿತ ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಎಸ್ ಪಿ, ಇಬ್ಬರು ಡಿವೈಎಸ್ ಪಿ, 5 ಸಿಪಿಐ, 10 ಪಿಎಸ್ ಐ ಸೇರಿದಂತೆ 300 ಮಂದಿ ಪೊಲೀಸ್ ಪೇದೆ, 2 ಕೆಎಸ್ ಆರ್ ಪಿ, 4 ಡಿಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ನಿಷೇದಾಜ್ಞೆ ನಡುವೆಯು ಶ್ರೀರಂಗಪಟ್ಟಣ ಚಲೋ ಮಾಡೇ ಮಾಡ್ತೀವಿ ಎಂದು ಹೇಳ್ತಿರುವ ವಿಎಚ್ ಪಿ ಮುಖಂಡರು ಪಟ್ಟುಹಿಡಿದಿದ್ದಾರೆ.










