ಬೆಂಗಳೂರು : ಪ್ರಸ್ತುತ ಮುಜಾರಾಯಿ ಇಲಾಖೆಯ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ಅವರಿಗೆ ನೋಟಿಸ್ ನೀಡಲಾಗಿದೆ.
ವಸತಿ ಇಲಾಖೆಯ ಕಾರ್ಯದರ್ಶಿ ಡಾ.ಜೆ ರವಿಶಂಕರ್ ನೋಟಿಸ್ ಜಾರಿ ಮಾಡಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಖುದ್ದು ಕಚೇರಿಗೆ ಹಾಜರಾಗಿ ಆರೋಪಗಳಿಗೆ ಉತ್ತರಿಸಲು ನೋಟಿಸ್ ನಲ್ಲಿ ಸೂಚಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕೇಳಿ ಬಂದಿದ್ದ ಆರೋಪಗಳ ಸಂಬಂಧ ವಿಚಾರಣೆ ನಡೆಯಲಿದೆ.
ಮೈಸೂರಿನ ಕೆಆರ್ ನಗರ ಶಾಸಕ ಸಾರಾ ಮಹೇಶ್ ಅವರು ಐಎಎಸ್ ಅಧಿಕಾರಿ, ಆಗಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಆರೋಪ, ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದಲ್ಲಿ ಅನಧಿಕೃತವಾಗಿ ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್ ನಿರ್ಮಾಣ ಮಾಡಿ ಪಾರಂಪರಿಕ ಕಟ್ಟಡಕ್ಕೆ ಹಾನಿ ಮಾಡಿರುವುದು, ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮುಚ್ಚಿಟ್ಟಿರುವುದು ಹಾಗೂ ಚಾಮರಾಜನಗರ ಆಕ್ಸಿಜನ ದುರಂತ ಪ್ರಕರಣಕ್ಕೆ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳನ್ನು ಸಿಂಧೂರಿ ವಿರುದ್ಧ ಮಾಡಲಾಗಿತ್ತು.










