ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರ ಮನೆಯ ಮುಂದೆಯೇ ರೌಡಿಶೀಟರ್ ಕೊಲೆಗೆ ಯತ್ನ ನಡೆದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಮಾರ್ಚ್ 21ರ ಮುಂಜಾನೆ ಈ ಘಟನೆ ನಡೆದಿದೆ.
ಹೈಗ್ರೌಂಡ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಗಗನ್ ಶರ್ಮಾ ಎಂಬಾತನ ಮೇಲೆ ಸುನೀಲ್ ಕುಮಾರ್, ಅರುಣ್, ಕೃಷ್ಣ ಕೃತ್ಯ ಎಸಗಿ ವಿಕೃತಿ ಮೆರೆದಿದ್ದಾರೆ. ರೌಡಿಶೀಟರ್ ಗಗನ್ ಮತ್ತು ಉಳಿದ ಆರೋಪಿಗಳೆಲ್ಲರೂ ಸ್ನೇಹಿತರು. ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿರುವ ಸುನೀಲ್ ಕುಮಾರ್ ಹಾಗೂ ಗಗನ್ ನಡುವೆ ಆಸ್ತಿ ವಿಚಾರಕ್ಕಾಗಿ ಮನಸ್ತಾಪವಾಗಿತ್ತು. ಹೀಗಾಗಿ ಸುನೀಲ್ ಮಾತನಾಡಬೇಕು ಎಂದು ಮಾರ್ಚ್ 20 ರಂದು ರಾತ್ರಿ 10 ಗಂಟೆಗೆ ಗಗನ್ ಗೆ ಕಾಲ್ ಮಾಡಿ ಫ್ರೇಜರ್ ಟೌನ್ ಗೆ ಕರೆಸಿಕೊಂಡಿದ್ದ.
ಬಳಿಕ ಅಲ್ಲಿಂದ ಕಾರಿನಲ್ಲಿ ಕೂರಿಸಿಕೊಂಡು ಸಿಟಿ ರೌಂಡ್ಸ್ ಹೊಡೆದು ಮಾರ್ಚ್ 21 ರ ಬೆಳಗ್ಗೆ ಜಯಮಹಲ್ ರಸ್ತೆ ಬಳಿ ಬಂದು ಕಾರು ನಿಲ್ಲಿಸಿದ್ದ. ಆದರೆ ಈ ವೇಳೆ ಗಲಾಟೆ ನಡೆದಿದೆ. ಸುನೀಲ್ ಸೇರಿ ಮೂವರು ಗಗನ್ ಮೇಲೆ ಹಲ್ಲೆ ನಡೆಸಿದ್ದಾರೆ. ದೊಣ್ಣೆ, ಕೈ ಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಕೆಳಗೆ ತಳ್ಳಿ ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಎಸ್ಕೇಪ್ ಆಗಿದ್ದಾರೆ. ಇದನ್ನು ಕಂಡ ಸ್ಥಳೀಯರು ಜೆ.ಸಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಗಾಯಾಳು ಗಗನ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಗಗನ್ ಕಾಲು, ಪಕ್ಕೆಲುಬು ಮುರಿದಿದ್ದು, ಕಣ್ಣು, ಮುಖ, ಕೈಗಳಿಗೆ ಗಂಭೀರ ಗಾಯಗಳಾಗಿವೆ. ಇನ್ನೂ ಘಟನೆ ಸಂಬಂಧ ಜೆ.ಸಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಸುನೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಮುಂದುವರೆದಿದೆ.