ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ – ಐವರು ಅರೆಸ್ಟ್!

96
firstsuddi

ಚಿತ್ರದುರ್ಗ : ಕೆಎಸ್ಆರ್ ಟಿಸಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 70 ಲಕ್ಷ ರೂಪಾಯಿ ವಂಚಿಸಿದ್ದ ಐವರನ್ನು ಜಿಲ್ಲೆಯ ಹೊಸದುರ್ಗದಲ್ಲಿ ಬಂಧಿಸಲಾಗಿದೆ.

ಬಂಧಿತರನ್ನು ಬಾಗಲಕೋಟೆಯ ಮಹಮ್ಮದ್ ಸಾಬ್, ವಿಜಯಪುರದ ಬಸವರಾಜ್, ಬಾಗಲಕೋಟೆಯ ವೀರಭದ್ರಪ್ಪ, ವಿಜಯನಗರ ಜಿಲ್ಲೆಯ ಮಂಜುನಾಥ, ಬೆಂಗಳೂರಿನ ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ.

2019ರಲ್ಲಿ ಸಾರಿಗೆ ಇಲಾಖೆಯಲ್ಲಿ ಸಂಚಾರಿ ನಿರೀಕ್ಷಕರು ಹಾಗೂ ಸಹಾಯಕ ಸಂಚಾರಿ ನಿರೀಕ್ಷಕರ ಹುದ್ದೆಗಳನ್ನು ಕರೆಯಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರ ಗ್ಯಾಂಗ್ ಸಾರಿಗೆ ಇಲಾಖೆ ಸೇರಿದಂತೆ ಸರ್ಕಾರದ ಮಟ್ಟದಲ್ಲಿ, ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ನಮಗೆ ಅನೇಕ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಹಣ ನೀಡಿದರೆ ನೌಕರಿ ಮಾಡಿಸಿಕೊಡುತ್ತೇವೆ ಎಂದು ಉದ್ಯೋಗಾಕಾಂಕ್ಷಿಗಳನ್ನು ನಂಬಿಸಿ ಹಣ ಪಡೆದಿದ್ದಾರೆ. ಅಲ್ಲದೇ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಕೆಎಸ್ ಆರ್ ಟಿಸಿ ತರಬೇತಿ ಕೇಂದ್ರದ ಮುಂಭಾಗದ ಪ್ರವಾಸಿ ಮಂದಿರಕ್ಕೆ ಕರೆಸಿ ಸಂದರ್ಶನದ ನಾಟಕ ಮಾಡಿದ್ದರೆಂದು ತಿಳಿದುಬಂದಿದೆ. ಈ ಆರೋಪಿಗಳು ಬೆಂಗಳೂರು, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ವಂಚನೆ ಎಸಗಿರುವುದು ಬೆಳಕಿಗೆ ಬಂದಿದ್ದು, ಸುಮಾರು 500 ಜನ ಉದ್ಯೋಗಾಕಾಂಕ್ಷಿಗಳು ವಂಚಕರ ಮೋಸದ ಜಾಲಕ್ಕೆ ಬಿದ್ದಿದ್ದಾರೆ.

ಹೊಸದುರ್ಗದ ಅಭಿಷೇಕ್ ಎಂಬುವರು ಅಕ್ಟೋಬರ್ 9ರಂದು ಈ ಬಗ್ಗೆ ದೂರು ನೀಡಿದ್ದಾರೆ. ವಂಚಕರ ಜಾಡು ಹಿಡಿದ ಹೊಸದುರ್ಗ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದು, ಬಂಧಿತರಿಂದ 12 ಲಕ್ಷ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂ. ಮೌಲ್ಯದ ಕಾರು, ನಕಲಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.