ವಿಜಯಪುರ : ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ಬೆನ್ನಲ್ಲೇ ಇದೀಗ ಸಂತ್ರಸ್ತೆ ಅಜ್ಜಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಯುವತಿ ಪೋಷಕರು ಬೆಳಗಾವಿಯಿಂದ ವಿಜಯಪುರಕ್ಕೆ ತೆರಳಿದ್ದಾರೆ. ಈ ಕುರಿತು ಮಾಧ್ಯಮಗಳ ಬಳಿ ಮಾತಾನಾಡಿದ ಸಿಡಿ ಯುವತಿ ತಂದೆ, ಈಗಾಗಲೇ ನಾವು ಸಾಕಷ್ಟು ಕುಗ್ಗಿ ಹೋಗಿದ್ದೇವೆ. ನಮ್ಮ ಅತ್ತೆಯವರು ಅನಾರೋಗ್ಯಕ್ಕೊಳಗಾಗಿದ್ದಾರೆ.ಇದರಿಂದ ಮತ್ತಷ್ಟು ನೊಂದಿದ್ದೇವೆ. ಸದ್ಯ ನಾವು ಮತ್ತಷ್ಟು ಮಾನಸಿಕ ಹಿಂಸೆ ಅನುಭವಿಸಲು ಸಿದ್ಧರಿಲ್ಲಾ. ಅಲ್ಲದೇ, ಮನಸ್ಸು ಕೂಡ ಸರಿ ಇಲ್ಲ. ಆದ್ದರಿಂದ ನಾವು ಇಲ್ಲಿಯೇ ನೆಮ್ಮದಿಯಿಂದ ಇರಲು ಅನುಕೂಲ ಮಾಡಿಕೊಡಬೇಕೆಂದು ಮಾಧ್ಯಮಗಳಿಗೆ ಹಾಗೂ ಜನರಿಗೆ ಮನವಿ ಮಾಡುತ್ತೇವೆ. ನಮ್ಮ ಅತ್ತೆಯವರ ಆರೋಗ್ಯ ಮತ್ತು ಚಿಕಿತ್ಸೆ ಕುರಿತು ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತೇವೆ. ಎಂದು ಯುವತಿ ತಂದೆ ಹೇಳಿದ್ದಾರೆ.
ನಾವು ಇಲ್ಲಿಗೆ ಯಾವುದೇ ಒತ್ತಡದಿಂದ ಬಂದಿಲ್ಲ. ಘಟನೆಯ ಬೆಳವಣಿಗೆಗಳ ಬಗ್ಗೆ ನಾನು ಹೆಚ್ಚಿಗೆ ಹೇಳಲು ಇಷ್ಟ ಪಡಲ್ಲಾ. ತನಿಖೆ ನಡೆಯುತ್ತಿದೆ, ಮುಂದೆ ಆ ದೇವರು ಏನೇನು ಬುದ್ದಿ ಕೊಡುತ್ತಾನೋ, ಏನೇನು ದಾರಿ ತೋರಿಸುತ್ತಾನೋ ನೋಡೋಣ ಎಂದು ಯುವತಿ ತಂದೆ ಹೇಳಿಕೆ ನೀಡಿದ್ದಾರೆ.
ಇನ್ನು ಡಿಕೆಶಿ ವಿರುದ್ಧ ಮಾಡಿರುವ ಆರೋಪದ ಕುರಿತು ಎಸ್ಐಟಿ ತನಿಖಾಧಿಕಾರಿಗಳಿಗೆ ರೆಕಾರ್ಡಿಂಗ್ ಹಾಗೂ ಇತರೆ ಮಾಹಿತಿ ಕೊಟ್ಟಿದ್ದೇವೆ. ಮುಂದೆ ಏನಾಗತ್ತೋ ನೋಡೋಣ. ನಮ್ಮ ಮಗಳಿಗೆ ಈಗಾಗಲೇ ಮನೆಗೆ ಬರುವಂತೆ ಮನವಿ ಮಾಡಿದ್ದು, ಜೊತೆಗೆ ನಮ್ಮ ಮಗಳ ಭೇಟಿಗೆ ಅವಕಾಶ ನೀಡಬೇಕೆಂದು ಪತ್ರ ಸಹ ನೀಡಿದ್ದೇವೆ. ತನಿಖೆಗಾಗಿ ಅಧಿಕಾರಿಗಳು ಮಗಳ ಭೇಟಿಗೆ ಅವಕಾಶ ನೀಡಿ ಯಾವಾಗ ಕರೆಯುತ್ತಾರೋ ಆಗ ನಾವು ಹೋಗುತ್ತೇವೆ ಎಂದು ಹೇಳಿದರು.










