ಉಡುಪಿ: ಜಿಲ್ಲೆಯ ಮಲ್ಪೆ ಬೀಚಿನ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತ ವಿದ್ಯಾರ್ಥಿಗಳನ್ನು ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನ ಸತೀಶ್ ಎಸ್ ಕಲ್ಯಾಣ್ ಶೆಟ್ಟಿ (21) ಮತ್ತು ಸತೀಶ್ ಎಂ ನಂದಿಹಳ್ಳಿ (21) ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಬೆಂಗಳೂರಿನ ಜಿಕೆವಿಕೆ ಕೃಷಿ ಕಾಲೇಜಿನ ಸುಮಾರು 65 ವಿದ್ಯಾರ್ಥಿಗಳು ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಬಂದಿದ್ದರು. ಈ ವೇಳೆ ಲೈಫ್ ಗಾರ್ಡ್ ಗಳ ಸೂಚನೆಯನ್ನು ಧಿಕ್ಕರಿಸಿ ಸೆಲ್ಫಿ ತೆಗೆಯಲು ತೆರಳಿದ್ದು, ಅಲೆಯ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ. ಸದ್ಯ ಒಬ್ಬ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು, ಇನ್ನೋರ್ವ ವಿದ್ಯಾರ್ಥಿಗಾಗಿ ಶೋಧ ನಡೆಸಲಾಗುತ್ತಿದೆ.
ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










