ಮುಂಬೈ : ಸತತ ಮೂರು ದಿನಗಳ ಕಾಲ ಬಾಲಿವುಡ್ ನಟ ಸೋನು ಸೂದ್ ಅವರ ಮನೆ, ಕಚೇರಿಗಳ ಮೇಲೆ ಸಮೀಕ್ಷೆ ನಡೆಸಿದ ಆದಾಯ ತೆರಿಗೆ ಇಲಾಖೆ ಇದೀಗ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ನಟ 20 ಕೋಟಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆಂದು ತಿಳಿಸಿದ್ದಾರೆ.
ಪ್ರಮುಖವಾಗಿ ಮುಂಬೈ, ಕಾನ್ಪುರ್, ಲಖನೌ, ಜೈಪುರ, ದೆಹಲಿ ಮತ್ತು ಗುರುಗ್ರಾಮ್ ಗಳಲ್ಲಿನ ಒಟ್ಟು 28 ಕಚೇರಿಗಳು, ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದರು.
ಸೋನು ಅವರ ಮನೆಯ ಮೇಲಿನ ಸಮೀಕ್ಷೆಯ ವೇಳೆ ಅವರು ತಮ್ಮ ಸಹವರ್ತಿಗಳೊಂದಿಗೆ ಕೂಡಿ ತೆರಿಗೆ ವಂಚನೆ ನಡೆಸಿದ್ದರ ಕುರಿತು ಸಾಕ್ಷ್ಯಗಳು ಪತ್ತೆಯಾಗಿವೆ. ಇದರಲ್ಲಿ ಮುಖ್ಯವಾಗಿ ಲೆಕ್ಕವಿಲ್ಲದ ಆದಾಯವನ್ನು ನಕಲಿ ಸಂಸ್ಥೆಗಳ ಮೂಲಕ ಸಾಗಿಸಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.
ನಟನ ವಿರುದ್ಧದ ಆರೋಪ :
ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡುವ ಮೂಲಕ ಅವರ ಜೀವನದಲ್ಲಿ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದರು. ಆದರೆ ಕಳೆದ ವರ್ಷ ಜುಲೈನಲ್ಲಿ ಕೋವಿಡ್ ಮೊದಲ ಅಲೆಯಲ್ಲಿ ಸ್ಥಾಪಿಸಲಾದ ಅವರ ಲಾಭರಹಿತ ಸೂದ್ ಚಾರಿಟಿ ಫೌಂಡೇಶನ್ 18 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಅದರಲ್ಲಿ 1.9 ಕೋಟಿ ಪರಿಹಾರ ಕಾರ್ಯಕ್ಕಾಗಿ ಖರ್ಚು ಮಾಡಿದೆ. ಉಳಿದ 17 ಕೋಟಿ ಹಣ ಲಾಭರಹಿತ ಬ್ಯಾಂಕ್ ಖಾತೆಯಲ್ಲಿ ಬಳಕೆಯಾಗದೆ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.