ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ…

59
firstsuddi

ಮಂಗಳೂರು: ಹಿರಿಯ ಸಾಹಿತಿ, ಕಾದಂಬರಿಗಾರ್ತಿ, ಸಾರಾ ಅಬೂಬಕ್ಕರ್(86) ಅವರು ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಸಾರಾ ಅಬೂಬಕ್ಕರ್ ಹುಟ್ಟಿದ್ದು 30 ಜೂನ್ 1936ರಂದು ಕಾಸರಗೋಡಿನ ಚಂದ್ರಗಿರಿಯಲ್ಲಿ. ವಿವಾಹವಾದ ಬಳಿಕ ಮಂಗಳೂರಿನ ಹ್ಯಾಟ್ ಹಿಲ್ ಬಳಿ ವಾಸವಾಗಿದ್ದರು. ಸಾರಾ ಅಬೂಬಕ್ಕರ್ ಅವರು ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿದ್ದರು. ಕುಗ್ರಾಮದಲ್ಲಿ ಹುಟ್ಟಿ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇವರು 10 ಕ್ಕೂ ಹೆಚ್ಚು ಕಾದಂಬರಿ, 6 ಕಥಾ ಸಂಕಲನ, 5 ಬಾನುಲಿ ನಾಟಕ, 4 ಲೇಖನ, ಒಂದು ಪ್ರವಾಸ ಕಥನ ಬರೆದಿದ್ದಾರೆ. ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಜನಪ್ರಿಯವಾಗಿ ಗಮನ ಸೆಳೆದಿದೆ.

ಸಾರಾ ಅಬೂಬಕ್ಕರ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ sಸೇರಿದಂತೆ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.

ಮಂಗಳೂರಿನ ಮನೆಯಲ್ಲೇ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ರಾತ್ರಿ 8 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಾಲ್ವರು ಪುತ್ರರು ಸೇರಿದಂತೆ ಅಪಾರ ಸಾಹಿತ್ಯ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.