ಹೊಸಪೇಟೆ: ನೀರು ಜೀವ ಜಲವಾದರೆ ಕಾವ್ಯವು ಭಾವ ಜಲವಾಗಿದೆ : ಅಲ್ಲಮಪ್ರಭು ಬೆಟ್ಟದೂರು.

155
First suddi hospet

ಹೊಸಪೇಟೆ: ನೀರು ಜೀವ ಜಲವಾದರೆ ಕಾವ್ಯವು ಭಾವ ಜಲವಾಗಿದೆ. ಕಾವ್ಯಗಳ ರಚನೆಯು ಸಾಂಸಾರಿಕ ವಿಚಾರಗಳನ್ನು ಹಿಡಿದಿಟ್ಟುಕೊಳ್ಳುವ ಒಂದು ಪ್ರಯತ್ನವಾಗಿದ್ದು, ಇವುಗಳಿಂದ ಜನಮನಕ್ಕೆ ಭಾವನಾತ್ಮಕ ಸಂಬಂಧಗಳನ್ನು ಮುಟ್ಟಿಸುವಂತಹ ಕೆಲಸ ಆಗಬೇಕಿದೆ ಎಂದು ಕೊಪ್ಪಳದ ನಿವೃತ್ತ ಪ್ರಾಚಾರ್ಯ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.
ಅವರು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಗುರುಶಿಷ್ಯರ ಬಳಗ, ಚಿದ್ರಿ ವಿದ್ಯಾರ್ಥಿ ಗೆಳೆಯರ ಪ್ರಕಾಶನ ಹಾಗೂ ಲಲಿತ ಕಲಾ ರಂಗದ ಸಹಯೋಗದಲ್ಲಿ ದುರ್ಗಾದಾಸ್ ಕಲಾಮಂದಿರದ ಅರವ ರಾಮಪ್ಪ ವೇದಿಕೆಯಲ್ಲಿ ಎಸ್ ಕಾಸೀಂ ಸಾಹೇಬ್ ವಿರಚಿತ ಹೇಳಲಾರೆ ಹೇಳದಿರಲಾರೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿದ್ದು, ಇಂತಹ ಮನಸ್ಸುಗಳನ್ನು ಕಟ್ಟುವಂತಹ ಸಾಹಿತ್ಯ ರಚನೆಯಾಗಬೇಕಿದೆ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ತಮ್ಮ ಪೋಷಕರನ್ನು ವೃದ್ದಾಪ್ಯದಲ್ಲಿ ವೃದ್ಧಾಶ್ರಮಗಳಿಗೆ ಸೇರಿಸುವ ಪರಿಪಾಠ ಪ್ರಾರಂಭವಾಗಿದ್ದು ಇದು ವಿಷಾದದ ಸಂಗತಿಯಾಗಿದೆ. ಆದ್ದರಿಂದ ವ್ಯಕ್ತಿಗತ ವಿಷಯಗಳ ಜೊತೆಗೆ ಭಾವನಾತ್ಮಕ ಸಂಬಂಧಗಳ ಹಾಗೂ ಸಾಮಾಜಿಕ ವಿಚಾರಗಳನ್ನು ಕುರಿತು ಸಾಹಿತ್ಯ ರಚನೆಯಾಗಬೇಕಿದೆ. ಪ್ರಸ್ತುತ ಎಸ್ ಕಾಸೀಂ ಸಾಹೇಬ್‍ರ ಹೇಳಲಾರೆ ಹೇಳದಿರಲಾರೆ ಕವನ ಸಂಕಲನದಲ್ಲಿ ಈ ಎಲ್ಲ ವಿಚಾರಗಳ ಅಭಿವ್ಯಕ್ತಿಯ ಜೊತೆಗೆ ಭಾವನೆಗಳ ಸಮಾಗಮವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಎಂ. ನಾಗಯ್ಯರು ಮಾತನಾಡಿ, ಸಾಹಿತ್ಯವು ಜಾತಿ ಧರ್ಮವನ್ನು ಮೀರಿ ರಚನೆಯಾದಾಗ ಮಾತ್ರ ಅದರಿಂದ ಸಮಾಜಕ್ಕೆ ಉತ್ತಮ ಸಂದೇಶವನ್ನು ನಿರೀಕ್ಷಿಸಲು ಸಾಧ್ಯ. ಕವಿಯು ಪ್ರಸ್ತುತ ಸಮಾಜದಲ್ಲಿನ ವಿದ್ಯಮಾನಗಳನ್ನು ಅರಿತು ತನ್ನ ಕಾವ್ಯದ ಮೂಲಕ ಹೊರಹಾಕುವುದರ ಮೂಲಕ ಆಡಳಿತ ಹಾಗೂ ಸಮಾಜದ ನೂನ್ಯತೆಗಳನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗಂಗಾವತಿಯ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸರಕಾರಿ ಪ್ರ.ದ. ಕಾಲೇಜಿನ ಸಂಯೋಜಕ ಜಾಜಿ ದೇವಂದ್ರಪ್ಪರು ಹೇಳಲಾರೆ ಹೇಳದಿರಲಾರೆ ಕವನ ಸಂಕಲನವನ್ನು ವಿಮರ್ಶಿಸಿದರು. ವೇದಿಕೆ ಕಾರ್ಯಕ್ರಮವನ್ನು ಡಾ. ಅಂಬಣ್ಣ ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಕಲಾವಿದ ಸಂತೋಷ್ ಹಾಗೂ ತಂಡದವರು ಕವನ ಸಂಕಲನದ ಕವನಗಳು ಹಾಗೂ ಗಜಲ್‍ಗಳನ್ನು ಹಾಡಿದರು. ಡಾ. ಕೆ.ನಾಗರತ್ನಮ್ಮ, ಡಾ.ಹೆಚ್.ಎಸ್, ಗುರುಪ್ರಸಾದ್, ಜಿ.ವಿ.ಸುಬ್ಬರಾವ್ ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಗುರುಶಿಷ್ಯ ಬಳಗದ ಎಂ. ವಿಶ್ವನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವನ ಸಂಕಲನದ ಪ್ರಕಾಶಕ ಚಿದ್ರಿ ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೆ. ಮಲ್ಲನಗೌಡ ಹಾಗೂ ಸಂಗಡಿಗರು ಪ್ರಾರ್ಥಿಸಿ, ಶಿಕ್ಷಕ ಕೆ. ನಾಗೇಶ್ ಸ್ವಾಗತಿಸಿದರು. ರಾಘವೇಂದ್ರ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಜಿ. ಸತ್ಯನಾರಾಯಣ್ ಶೆಟ್ಟಿ, ಎಸ್. ರಾಮ ಮೂರ್ತಿ, ಸಚ್ಚಿದಾನಂದ ಶೆಟ್ಟಿ, ನಾಗರಾಜ್ ಹವಾಲ್ದಾರ್, ರಾಮನಾಯ್ಕ್, ಶೇಷಗಿರಿ ರಾವ್, ವಸ್ತ್ರದ್ ವೀರಭದ್ರಯ್ಯ, ಚಿದ್ರಿ ಸೀತಾಲಕ್ಷ್ಮಿ, ಚಿದ್ರಿ ಅನಂತ ಲಕ್ಷ್ಮಿ ಹಾಗೂ ಇತರರು ಇದ್ದರು.