ಅಜ್ಜ ಮೊಬೈಲ್ ಕೊಡಿಸದ್ದಕ್ಕೆ ಯುವಕ ಆತ್ಮಹತ್ಯೆ!

52
firstsuddi

ಚಿತ್ರದುರ್ಗ: ಅಜ್ಜ ಮೊಬೈಲ್ ಕೊಡಿಸದ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ನಡೆದಿದೆ.

ಕೊಳಾಳ್ ಗ್ರಾಮದ ಯಶವಂತ್ (20) ಮೃತ ಯುವಕ. ಅಕ್ಟೋಬರ್ 8ರಂದು ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಗಣಪತಿ ವಿಸರ್ಜನೆ ಹಬ್ಬದ ವೇಳೆ ಲಕ್ಷಾಂತರ ಜನರು ಸೇರಿದ್ದರು. ಈ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದ ಯಶವಂತ್, ಜನರ ನೂಕುನುಗ್ಗಲಿನಲ್ಲಿ ತನ್ನ ಮೊಬೈಲ್ ಕಳೆದುಕೊಂಡಿದ್ದನು. ಹೀಗಾಗಿ ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ಬಳಿ ಹಠ ಹಿಡಿದಿದ್ದನು. ಈ ವೇಳೆ ಅಜ್ಜ, ಈರುಳ್ಳಿ ಬೆಳೆ ಬಂದ ಬಳಿಕ ಮೊಬೈಲ್ ಕೊಡಿಸುವುದಾಗಿ ಹೇಳಿದ್ದರು.

ಆದರೆ ಯಶವಂತ್, ಬೆಳೆ ಬರುವವರೆಗೆ ಕಾಯದೇ ಅಕ್ಟೋಬರ್ 18ರಂದು ಮನೆಯಲ್ಲಿ ರಾಸಾಯನಿಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ವಿಷಯ ತಿಳಿದು ಸಂಬಂಧಿಕರು ಕೂಡಲೇ ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿದರು. ಆದರೆ ಯಶವಂತ್ ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ನಿನ್ನೆ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಸಾಗಿಸಲಾಗುತ್ತಿದ್ದ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಘಟನೆ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.