ಅನರ್ಹ ಶಾಸಕರು ಮೂಲೆಗುಂಪಾಗುತ್ತಾರೆ ಎಂದವರಿಗೆ ಸುಪ್ರೀಂ ತಕ್ಕ ಉತ್ತರ ನೀಡಿದೆ : ಹೆಚ್. ವಿಶ್ವನಾಥ್.

265
firstsuddi

ನವದೆಹಲಿ : ಅನರ್ಹ ಶಾಸಕರ ಕುರಿತು ಸುಪ್ರೀಂ ಆದೇಶಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಸ್ವೀಕರಿಸುತ್ತೇವೆ. ಇದರಿಂದ ನಮಗೆ ಖುಷಿಯಾಗಿದೆ. ಸುಪ್ರೀಂ ಕೋರ್ಟ್ ನಮಗೆ ಒಂದು ದೊಡ್ಡ ಅವಕಾಶವನ್ನು ನೀಡಿದೆ. ನಾವು ಸುಪ್ರೀಂ ಕೋರ್ಟ್‍ಗೆ ಬೇಕಾದಷ್ಟು ಬೇಡಿಕೆಯನ್ನು ಇಟ್ಟಿದ್ದೆವು. ಅದರಲ್ಲಿ ನಾವು ಚುನಾವಣೆಯಲ್ಲಿ ಸ್ಪರ್ಧಿಸಬೇಕೆನ್ನುವುದು ಪ್ರಮುಖ ಬೇಡಿಕೆಯಾಗಿತ್ತು. ಸ್ಪೀಕರ್ ರಮೇಶ್ ಕುಮಾರ್ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದೊಂದಿಗೆ ಸೇರಿಕೊಂಡು 17 ಜನ ಶಾಸಕರನ್ನು ಮೂರುವರೆ ವರ್ಷಗಳ ಕಾಲ ರಾಜಕೀಯದಿಂದ ದೂರ ಹಿಡುವ ಹುನ್ನಾರ ನಡೆಸಿದ್ದರು. ಆದರೆ ಅವರ ಈ ಹುನ್ನಾರವನ್ನು ಸುಪ್ರೀಂ ಕೋರ್ಟ್ ಕಡೆಗಣಿಸಿದ್ದು, ಈಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವುದಕ್ಕೆ ಅವಕಾಶವನ್ನು ಕಲ್ಪಿಸಿದೆ. ಕೆಲವರು ನಮ್ಮ ರಾಜಕೀಯ ಭವಿಷ್ಯವೇ ಮುಗಿಯಿತು. ಇನ್ನೂ ಮೂರುವರೆ ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಅನರ್ಹ ಶಾಸಕರೆಲ್ಲರೂ ಮೂಲೆಗುಂಪಾದರು ಎಂದು ಮಾತನಾಡುತ್ತಿದ್ದರು. ಇದಕ್ಕೆಲ್ಲಾ ಸುಪ್ರೀಂ ಕೋರ್ಟ್ ತಕ್ಕ ಉತ್ತರ ನೀಡಿದೆ ಎಂದರು.