ಬಾಗಲಕೋಟೆ : ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ರೀತಿ ಕರ್ನಾಟಕದಲ್ಲೂ ಅಂತಹದ್ದೇ ಭಯಾನಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಮುಧೋಳ ನಗರದಲ್ಲಿ ಪಾಪಿ ಮಗನೊಬ್ಬ ತನ್ನ ತಂದೆಯನ್ನ ಕೊಂದು 30 ತುಂಡುಗಳಾಗಿ ಕತ್ತರಿಸಿ, ಕೊಳವೆ ಬಾವಿಗೆ ಬಿಸಾಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪರಶುರಾಮ ಕುಳಲಿ (54) ಕೊಲೆಯಾದ ವ್ಯಕ್ತಿ. ಇವರ ಮಗ ವಿಠ್ಠಲ ಕುಳಲಿ(21) ಕೊಲೆ ಆರೋಪಿ ಆಗಿದ್ದಾನೆ. ಕಳೆದ ಮಂಗಳವಾರ (ಡಿಸೆಂಬರ್ 6)ರಂದು ಹತ್ಯೆ ನಡೆದಿದೆ ಎನ್ನಲಾಗಿದೆ.
ತಂದೆ ಕುಡಿದ ಮತ್ತಿನಲ್ಲಿ ಮಗನಿಗೆ ಬೈಯ್ಯೋದು, ಹಲ್ಲೆ ಮಾಡೋದು ಮಾಡ್ತಿದ್ದರು. ಇದರಿಂದ ರೋಸಿ ಹೋಗಿದ್ದ ಮಗ, ಕಬ್ಬಿಣದ ರಾಡ್ ನಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಮೃತದೇಹವನ್ನು ಕೊಳವೆ ಬಾವಿಗೆ ಹಾಕಲು ಹೋಗಿದ್ದಾನೆ. ಕೊಳವೆ ಬಾವಿಗೆ ದೇಹ ಇಳಿಯದೇ ಇದ್ದಾಗ, ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿ, ನಂತರ ಕೊಳವೆ ಬಾವಿಗೆ ಹಾಕಿದ್ದಾನೆ. ಇದೀಗ ಕೊಲೆಗಡುಕನ ಬಣ್ಣ ಬಯಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಜೆಸಿಬಿಯಿಂದ ಕೊಳವೆಬಾವಿ ಅಗೆದು ದೇಹದ ತುಂಡುಗಳನ್ನು ಹೊರತೆಗೆದು ಮರಣೋತ್ತರ ಶವ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










