ಅಪ್ರಾಪ್ತೆಯನ್ನು ಮದುವೆಯಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕನಿಗೆ ಶಿಕ್ಷೆ…

70
firstsuddi

ಚಾಮರಾಜನಗರ : ಅಪ್ರಾಪ್ತೆಯನ್ನು ಅಪಹರಿಸಿ ಮದುವೆಯಾಗಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪಿಗೆ 20 ವರ್ಷ ಕಠಿಣ ಸಜೆ ಹಾಗು ಮೂವತೈದು ಸಾವಿರ ರೂಪಾಯಿ ವಿಧಿಸಿ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಮಹೇಶ್ (28)ಅಲಿಯಾಸ್ ಮಾಯ ಎಂಬಾತ ಶಿಕ್ಷೆಗೆ ಒಳಪಟ್ಟ ಆಪರಾಧಿ.

ಈತ 2019 ರ ಮಾರ್ಚ್ 17 ರಂದು 15 ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಬಳಿಕ ಬೆಂಗಳೂರಿಗೆ ಆಕೆಯನ್ನು ಕರೆದೊಯ್ದು ಮನೆಯೊಂದರಲ್ಲಿ ಇರಿಸಿಕೊಂಡು ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಷಯ ಗೊತ್ತಾಗಿ ನೊಂದ ಬಾಲಕಿಯ ತಂದೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಆರೋಪಿ ಮಹೇಶ್ ವಿರುದ್ದ ದೂರು ನೀಡಿದ್ದರು. ಆರೋಪಿ ವಿರುದ್ದ ಐಪಿಸಿ ಸೆಕ್ಷನ್ 366(ಎ), 376(ಎನ್), ಪೋಕ್ಸೋ ಕಲಂ 4,6,12 ಹಾಗಿ ಕಲಂ 9,10 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯೆಡಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಅವರು ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ 35 ಸಾವಿರ ರೂ.ದಂಡ ವಿಧಿಸಿದ್ದು, ಕಾನೂನು ಸೇವಾ ಪ್ರಾಧಿಕಾರದಿಂದ ನೊಂದ ಬಾಲಕಿಗೆ ಪರಿಹಾರದ ರೂಪದಲ್ಲಿ 5 ಲಕ್ಷ ರೂ. ಹಣವನ್ನು ಒಂದು ತಿಂಗಳೊಳಗೆ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ. ಯೋಗೇಶ್ ವಾದ ಮಂಡಿಸಿದ್ದರು.