ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಈಗ ಆಸ್ಕರ್ ರೇಸ್ಗೆ ಎಂಟ್ರಿ ಕೊಟ್ಟಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಎರಡು ವಿಭಾಗದಲ್ಲಿ ಅದು ಅರ್ಹತೆ ಸುತ್ತನ್ನು ಪಾಸು ಮಾಡಿದ್ದು, ಮುಂದಿನ ಹಂತಕ್ಕೆ ಸಿನಿಮಾ ಹೋಗಬೇಕಾದರೆ, ಆಸ್ಕರ್ ಸದಸ್ಯರು ಮತ ಚಲಾಯಿಸುವುದು ಕಡ್ಡಾಯವಾಗಿದೆ. ವಿಶ್ವದಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಪಾಸಾಗಿವೆ.
‘ಕಾಂತಾರ’ ಸಿನಿಮಾ 2 ಆಸ್ಕರ್ ಅರ್ಹತೆ ಪಡೆದಿರುವ ವಿಚಾರ ತಿಳಿಸಲು ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
ನಟ ರಿಷಭ್ ಶೆಟ್ಟಿ ಕೂಡ ಟ್ವೀಟ್ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ‘ಕಾಂತಾರ ಸಿನಿಮಾ ಆಸ್ಕರ್ ಅರ್ಹತೆಯ ಸುತ್ತಿನಲ್ಲಿ ಎರಡು ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ. ಈ ವಿಚಾರ ತಿಳಿಸಲು ಸಂತಸವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಅಲ್ಲದೇ, ಮುಂದಿನ ಹಂತಕ್ಕೆ ಹೋಗಿದ್ದು ಸಂಭ್ರಮ ತಂದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಅದೇ ರೀತಿ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಆಸ್ಕರ್ ಅರ್ಹತೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ನಟನಾ ವಿಭಾಗದಲ್ಲಿ ಈ ಸಿನಿಮಾ ಆಯ್ಕೆಯಾಗಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರೂಪ್ ಭಂಡಾರಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.










